ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ವಿಚಾರವಾಗಿ ಭಾರೀ ಗದ್ದಲ ಏರ್ಪಟ್ಟಿತ್ತು. ಫಲಾನುಭವಿಗಳಿಗೆ ನೀಡಬೇಕಾದ ಬಾಕಿ ಹಣದ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷದ ನಡುವೆ ತೀವ್ರ ವಾಕ್ಸಮರ ನಡೆಯಿತು. ವಿಪಕ್ಷಗಳ ಪ್ರಶ್ನೆಗಳ ಬಾಣಕ್ಕೆ ತತ್ತರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನೆರವಿಗೆ ಧಾವಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಹಿಳೆಯರಿಗೆ ಸಿಹಿ ಸುದ್ದಿಯೊಂದನ್ನು ನೀಡುವ ಮೂಲಕ ಗದ್ದಲಕ್ಕೆ ತೆರೆ ಎಳೆದರು.
ಫೆಬ್ರವರಿ, ಮಾರ್ಚ್ ಹಣ ಎಲ್ಲಿ? ವಿಪಕ್ಷಗಳ ನೇರ ಪ್ರಶ್ನೆ
ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಮಹೇಶ್ ತೆಂಗಿನಕಾಯಿ ಅವರು, ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಇನ್ನೂ ಬಿಡುಗಡೆಯಾಗಿಲ್ಲ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಲು ಯತ್ನಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಈಗಾಗಲೇ ಎಲ್ಲವನ್ನೂ ಹೇಳಿದ್ದೇನೆ, ಆಗಸ್ಟ್ ವರೆಗಿನ ಹಣ ಕ್ಲಿಯರ್ ಆಗಿದೆ ಎಂದು ಸಮಜಾಯಿಷಿ ನೀಡಲು ಮುಂದಾದರು. ಆದರೆ ಸಚಿವರ ಈ ಉತ್ತರ ಪ್ರತಿಪಕ್ಷಗಳನ್ನು ಕೆರಳಿಸಿತು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆರ್ ಅಶೋಕ್ ಕೆಂಡಾಮಂಡಲ
ಸಚಿವರು ನೀಡಿದ ಉತ್ತರಕ್ಕೆ ತೃಪ್ತರಾಗದ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತು ಶಾಸಕ ಸುನೀಲ್ ಕುಮಾರ್, ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ನೀಡಿರುವ ಅಧಿಕೃತ ಮಾಹಿತಿಯ ಪತ್ರವನ್ನು ಪ್ರದರ್ಶಿಸಿದ ಅಶೋಕ್, ಅಧಿಕಾರಿಗಳ ಮಾಹಿತಿಗೂ ಸಚಿವರ ಹೇಳಿಕೆಗೂ ತಾಳೆಯಾಗುತ್ತಿಲ್ಲ. ಯಾವ ತಿಂಗಳವರೆಗೆ ಹಣ ಬಿಡುಗಡೆಯಾಗಿದೆ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ ಎಂದು ಕಿಡಿಕಾರಿದರು.
ಸಚಿವರು ವಿಪಕ್ಷದವರನ್ನು ದಡ್ಡರು, ಕಡಿಮೆ ಜ್ಞಾನದವರು ಎಂಬ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ನಾವೇನು ದಡ್ಡರಾ? ನಮ್ಮ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಿ ಎಂದು ಸಚಿವರು ಹೇಳುತ್ತಾರೆ, ಆದರೆ ಅವರು ಸದನಕ್ಕೆ ತಯಾರಾಗಿ ಬಂದಿಲ್ಲ ಎಂಬುದು ಅವರ ಉತ್ತರದಲ್ಲೇ ತಿಳಿಯುತ್ತದೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ರಾತ್ರಿ ಡಿನ್ನರ್ ಮಾಡ್ತೀರಾ, ಸದನಕ್ಕೆ ತಯಾರಾಗಿ ಬರೋದಿಲ್ಲ!
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡ ಆರ್. ಅಶೋಕ್, ನೀವು ರಾತ್ರಿಯೆಲ್ಲಾ ಡಿನ್ನರ್ ಮೀಟಿಂಗ್ ಮಾಡುತ್ತೀರಾ, ಬೆಳಗ್ಗೆ ತಡವಾಗಿ ಏಳುತ್ತೀರಿ. ಹೀಗಾಗಿ ಇಲಾಖೆಯ ಮಾಹಿತಿಯನ್ನೇ ಓದಿಕೊಂಡು ಬರುವುದಿಲ್ಲ. ಹೇಳೋರು ಕೇಳೋರು ಯಾರೂ ಇಲ್ಲವಾ? ತಪ್ಪು ಮಾಹಿತಿ ನೀಡಿದ ಸಚಿವರಿಗೆ ಏನು ಶಿಕ್ಷೆ ನೀಡುತ್ತೀರಿ ಎಂದು ಸರ್ಕಾರದ ವಿರುದ್ಧ ಗುಡುಗಿದರು.
ಸಚಿವರ ರಕ್ಷಣೆಗೆ ಬಂದ ಸಿಎಂ, ಮಹಿಳೆಯರಿಗೆ ಗುಡ್ ನ್ಯೂಸ್
ತಮ್ಮ ಸಂಪುಟದ ಸಚಿವೆ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಮಧ್ಯಪ್ರವೇಶಿಸಿದರು. ಸಚಿವರು ಆಗಸ್ಟ್ ವರೆಗೆ ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ತಾಂತ್ರಿಕ ಕಾರಣಗಳಿಂದ ಸಾಮಾನ್ಯವಾಗಿ ಹಣ ಜಮೆ ಆಗಲು ಒಂದೆರಡು ತಿಂಗಳು ವಿಳಂಬವಾಗುವುದು ಸಹಜ.
ಒಂದು ವೇಳೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂದಾದರೆ, ಅದನ್ನು ಪರಿಶೀಲಿಸಿ ಕೂಡಲೇ ಬಾಕಿ ಹಣವನ್ನು ಬಿಡುಗಡೆ ಮಾಡಿಸೋಣ ಎಂದು ಸಿಎಂ ಸದನಕ್ಕೆ ಭರವಸೆ ನೀಡಿದರು. ಅಲ್ಲದೆ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ ಫಲಾನುಭವಿಗಳಿಗೆ ಶುಭ ಸುದ್ದಿ ನೀಡಿದರು.
ಗೃಹಲಕ್ಷ್ಮಿ ಹಣದ ವಿಚಾರ ಸದನದಲ್ಲಿ ಕಾವೇರಿದ ಚರ್ಚೆಗೆ ಕಾರಣವಾಯಿತಾದರೂ, ಅಂತಿಮವಾಗಿ ಮುಖ್ಯಮಂತ್ರಿಗಳ ಸ್ಪಷ್ಟನೆಯಿಂದಾಗಿ ಫಲಾನುಭವಿಗಳಿಗೆ ಬಾಕಿ ಹಣ ಸಿಗುವ ಭರವಸೆ ದೊರೆತಂತಾಗಿದೆ.








