ನಾನು ಅಂಬರೀಶ್ ಅಭಿಮಾನಿ, ಅವರು ನಮ್ಮ ಹೃದಯದಲ್ಲಿದ್ದಾರೆ : ಸಾ.ರಾ.ಮಹೇಶ್
ಮಂಡ್ಯ : ಅಂಬರೀಶ್ ಅವರಿಗೆ ವೈಯಕ್ತಿಕ ಆಸ್ತಿ ಇರಬಹುದು. ಆದರೆ ಸುಮಲತಾಗೆ ಗೊತ್ತಾಗೊ ಮುಂಚೆಯೇ ನಾನು ಅಂಬರೀಶ್ ಅಭಿಮಾನಿ. ಇವತ್ತೂ ಅಂಬರೀಶ್ ನಮ್ಮ ಹೃದಯದಲ್ಲಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
ನನ್ನ ಬಗ್ಗೆ ಮಾತನಾಡುವವರು ಅಂಬರೀಶ್ ಕಾಲ ಧೂಳಿಗೂ ಸಮರಲ್ಲ ಎಂಬ ಸುಮಲತಾ ಅವರ ಹೇಳಿಕೆಗೆ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ ಸಾ.ರಾ.ಮಹೇಶ್, ಅವರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನಿಮಗಾಗಲಿ, ನಮ್ಮ ಪಕ್ಷದವರಿಗಾಗಲಿ ಇಲ್ಲ. ಅವರು ಅಂಬರೀಶ್ ಅಣ್ಣನವರ ಧರ್ಮಪತ್ನಿ. ಕೋವಿಡ್ ಪ್ರಾರಂಭ ಆದ ನಂತರ ನನ್ನ ಕ್ಷೇತ್ರವೂ ಸೇರಿ ಎಲ್ಲಾ ಗ್ರಾಮಕ್ಕೆ ಹೋಗಿ ಬ್ಯುಸಿ ಆಗಿದ್ದಾರೆ. ಅವರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನಿಮಗಾಗಲಿ, ನಮ್ಮ ಪಕ್ಷದವರಿಗಾಗಲಿ ಇಲ್ಲ ಎಂದು ವ್ಯಂಗ್ಯವಾಡಿದರು.
ಇನ್ನು ನಾವ್ಯಾರೂ ಅಂಬರೀಶ್ ಬಗ್ಗೆ ಮಾತನಾಡುತ್ತಿಲ್ಲ. ಪಾಪ ಈಗ ಮಾತನಾಡುತ್ತಿರುವವರ ಬಗ್ಗೆ ಮಾತನಾಡುವಷ್ಟು ದೊಡ್ಡವರಲ್ಲ. ಅಂಬರೀಶ್ ಅವರಿಗೆ ವಯಕ್ತಿಕ ಆಸ್ತಿ ಇರಬಹುದು. ಆದರೆ ಸುಮಲತಾಗೆ ಗೊತ್ತಾಗೊ ಮುಂಚೆಯೇ ನಾನು ಅಂಬರೀಶ್ ಅಭಿಮಾನಿ. ಇವತ್ತೂ ಅಂಬರೀಶ್ ನಮ್ಮ ಹೃದಯದಲ್ಲಿದ್ದಾರೆ. ನಾವು ಅವರಿಗೆ ಕೊಟ್ಟ ಗೌರವ ಅಲ್ಲಗಳೆಯುವಂತ್ತಿಲ್ಲ. ಆದರೆ ಅಂಬರೀಶ್ ನಮ್ಮನ್ನ ಅಗಲಿದಾಗ ಸಿಎಂ ಕುಮಾರಸ್ವಾಮಿ ನಡೆದುಕೊಂಡದ್ದನ್ನ ಎಂಪಿಯವರು ಯೋಚನೆ ಮಾಡಬೇಕಿತ್ತು ಎಂದು ಹೇಳಿದರು.









