ತಾನು ಸಂಪೂರ್ಣವಾಗಿ ನಿರಪರಾಧಿ – ಎಲ್.ಕೆ.ಅಡ್ವಾಣಿ
ಲಕ್ನೋ, ಜುಲೈ 25: 1992 ರ ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ಕೆಡವಲು ಕರ ಸೇವಕರ ಜೊತೆಗೆ ಪಿತೂರಿ ನಡೆಸಿದ ಆರೋಪವನ್ನು ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಶುಕ್ರವಾರ ನಿರಾಕರಿಸಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ತಮ್ಮನ್ನು ಅನಗತ್ಯವಾಗಿ ಎಳೆದೊಯ್ಯಲಾಗಿದೆ ಎಂದು ಮನವಿ ಮಾಡಿದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ತಾನು ಸಂಪೂರ್ಣವಾಗಿ ನಿರಪರಾಧಿ ಎಂದು ಮನವಿ ಮಾಡಿದ್ದಾರೆ.

ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಿರಿಯ ರಾಜಕಾರಣಿ ಅಡ್ವಾಣಿ ಅವರ ಹೇಳಿಕೆಯನ್ನು ದಾಖಲಿಸಿ ಕೊಂಡಿದೆ. ಬೆಳಗ್ಗೆ 11 ರಿಂದ ಸಂಜೆ 3.30 ರವರೆಗೆ ವಿಚಾರಣೆ ನಡೆಸಿದ್ದು, ಈ 4.5 ಗಂಟೆಗಳ ಅವಧಿಯಲ್ಲಿ ಎಲ್.ಕೆ.ಅಡ್ವಾಣಿ ಅವರಿಗೆ ಸುಮಾರು 100 ಪ್ರಶ್ನೆಗಳನ್ನು ಕೇಳಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದ್ದು ಅಗಸ್ಟ್ 31ರೊಳಗೆ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ.








