ಬೆಂಗಳೂರು : ನಾನು ಸಿಎಂ ಯಡಿಯೂರಪ್ಪ ಕ್ಯಾಬಿನೆಟ್ ನಲ್ಲಿ ಮಂತ್ರಿ ಆಗಲ್ಲ. ನನಗೆ ಸಚಿವ ಆಗೋ ಮನಸ್ಸು ಇಲ್ಲ. ಸಚಿವ ಆಗೊಲ್ಲ ಅಂತ ನಾನೇ ನಿರ್ಧಾರ ಮಾಡಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರನ್ನು ಅಭಿವೃದ್ಧಿ ವಿಚಾರವಾಗಿ ಭೇಟಿ ಆಗಿದ್ದೇವು. ಕೆಲಸ ಆಗಿಲ್ಲ ಅಂತ ಅಸಮಾಧಾನ ಇತ್ತು. ಹೀಗಾಗಿ ಅವರನ್ನು ಭೇಟಿ ಮಾಡಿದ್ವಿ. ಇದು ಯಾವುದೇ ಭಿನ್ನಮತ ಅಲ್ಲ, ಸಿಎಂ ಅವರ ಕೆಲಸವನ್ನು ಪಿಎಂ, ರಾಷ್ಟ್ರ ಅಧ್ಯಕ್ಷರು ಹೊಗಳಿದ್ದಾರೆ. ಶಾಸಕರು ಸಿಎಂ ಕೆಲಸ ಮೆಚ್ಚಿದ್ದಾರೆ. ಕೆಲ ಮಾಧ್ಯಮಗಳು ಈ ಸಮಯದಲ್ಲಿ ಭಿನ್ನಮತ ಬೇಕಾ ಅಂತ ಸುದ್ದಿ ಮಾಡಿವೆ ಎಂದರು.
ಇದೇ ವೇಳೆ ಮಂತ್ರಿ ಆಗುವ ಬಗ್ಗೆ ಮಾತನಾಡಿದ ಅವರು, ಸದ್ಯ ನಾವು ಯಾವುದೇ ಭಿನ್ನಮತ ಸಭೆ ಮಾಡಿಲ್ಲ, ಅನುದಾನ, ನಾಯಕತ್ವದ ಬಗ್ಗೆ ಅಧಿಕಾರಿಗಳ ವರ್ಗಾವಣೆ ಬಗ್ಗೆ ಮಂತ್ರಿ ಆಗೋ ಬಗ್ಗೆ ಚರ್ಚೆ ಆಗಿಲ್ಲ. ನಾನು ಸಿಎಂ ಯಡಿಯೂರಪ್ಪ ಕ್ಯಾಬಿನೆಟ್ ನಲ್ಲಿ ಮಂತ್ರಿ ಆಗೊಲ್ಲ. ನನಗೆ ಸಚಿವ ಆಗೋ ಮನಸ್ಸು ಇಲ್ಲ. ನಾನೇ ನಿರ್ಧಾರ ಮಾಡಿದ್ದೇನೆ ಸಚಿವ ಆಗೊಲ್ಲ ಅಂತ. ನಾವು ಯಾವುದೇ ಸಭೆ ಮಾಡಿಲ್ಲ ಎಂದು ಪುನರುಚ್ಚರಿಸಿದರು.
ಇದೇ ವೇಳೆ ಸಿಎಂಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ ಅವರು, ಅಭಿವೃದ್ಧಿ ಸಲುವಾಗಿ ನಾನು ಕೆಲಸ ಮಾಡ್ತೀನಿ. ಅಭಿವೃದ್ಧಿ ಬಗ್ಗೆ ಮಾತ್ರ ಅಧ್ಯಕ್ಷರ ಬಳಿ ಮಾತಾಡಿದ್ದೇವೆ. ಸಮಾಧಾನ ಇದೆಯೋ, ಅಸಮಾಧಾನ ಇದೆಯೋ ಯಾರಿಗೆ ತಲುಪಿಸಬೇಕೋ ಅವರಿಗೆ ತಲುಪಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದರು. ಹಾಗೇ ಯಾವ ಕಾಲದಲ್ಲಿ ಹೇಗೆ ಇರಬೇಕು ಹಾಗೆ ಇರಬೇಕು. ಕಾಲಾಯ ತಸ್ಮೈ ನಮಃ, ನಾನು ತಲೆ ಬಗ್ಗಿಸಿ ನಡೆಯುತ್ತಿದ್ದೇನೆ ಅಂದರೆ ಮುಂದೆ ಒಳ್ಳೆಯದು ಆಗುತ್ತೆ ಅಂತ ಅರ್ಥ ಎಂದು ಯತ್ನಾಳ್ ಹೇಳಿದರು.








