ನಾನು ಏನು ಗೌತಮ ಬುದ್ದನಲ್ಲ…ದೊಡ್ಡ ಗಣೇಶ್‍ಗೆ ವಾಪಸ್ ಕೊಟ್ಟೆ ಕೊಡ್ತಿನಿ.. ಹೀಗೆ ಅಬ್ಬರಿಸಿದ್ದು ಬೇರೆ ಯಾರು ಅಲ್ಲ, ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ, ಪಂಜಾಬ್ ನ ಹೀರೋ ನವಜೋತ್ ಸಿಂಗ್ ಸಿದೂ. ಹೌದು, ಇದು ಕ್ರ್ರಿಕೆಟ್ ಮೈದಾನದಲ್ಲಿ ನಡೆದಿರುವ ಘಟನೆ.. ಸುಮಾರು 21 ವರ್ಷಗಳ ಹಿಂದೆ. ಅದು 1998-99ರ ರಣಜಿ ಋತು. ಕರ್ನಾಟಕ ಅದ್ಭುತ ಪ್ರದರ್ಶನ ನೀಡಿರುವ ವರ್ಷ. ಸೆಮಿಫೈನಲ್ ನಲ್ಲಿ ಕರ್ನಾಟಕದ ಎದುರಾಳಿ ಪಂಜಾಬ್. ಅಮೃತಸರದಲ್ಲಿ ನಡೆದಿದ್ದ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಮೊದಲ ವಿಕೆಟ್‍ಗೆ ಅಜೇಯ 45 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು.
ಆಗಲೇ ಪಂಜಾಬ್ ತಂಡದ ಆರಂಭಿಕ ನವಜೋತ್ ಸಿಂಗ್ ಸಿದೂ ಅವರ ಪಿತ್ತ ನೆತ್ತಿಗೇರಿದ್ದು. ಕರ್ನಾಟಕದ ವೇಗಿ ದೊಡ್ಡ ಗಣೇಶ್ ಅವರು ಬೌಲಿಂಗ್ ಮಾಡುತ್ತಿರುವಾಗ ಸಿದೂ ಅವರನ್ನು ಕೆಣಕಲು ಮುಂದಾದ್ರು. ಹಾಗಂತ ದೊಡ್ಡ ಗಣೇಶ್ ಸ್ಲಡ್ಜಿಂಗ್ ಏನು ಮಾಡುತ್ತಿರಲಿಲ್ವಂತೆ. ಆದ್ರೆ ಸಿದೂ ಅವರನ್ನು ಕುಪಿತಗೊಳ್ಳುವಂತೆ ಏನೇನೂ ತಮ್ಮದೇ ಸ್ಟೈಲ್ ನಲ್ಲಿ ಗೊಣಗುತ್ತಿದ್ರಂತೆ. ಆಗ ಸಿಟ್ಟಿಗೆ ಎದ್ದ ಸಿದೂ ಮತ್ತು ದೊಡ್ಡ ಗಣೇಶ್ ನಡುವೆ ಜಟಾಪಟಿಯೇ ನಡೆದು ಹೋಯ್ತಂತೆ.
ಸಿದೂ ಮೈದಾನದಲ್ಲಿ ಗಣೇಶ್ ಅವರನ್ನು ಬೆನ್ನಟ್ಟಿಕೊಂಡು ಹೋಗಿದ್ರಂತೆ. ಅಂಪೈರ್‍ಗಳಿಗೂ ಏನಾಗುತ್ತಿದೆ ಎಂಬುದೇ ತಿಳಿದಿರಲಿಲ್ವಂತೆ. ಆಗ ಮಧ್ಯೆ ಬಂದ ಕರ್ನಾಟಕ ತಂಡದ ನಾಯಕ ಸುಜೀತ್ ಸೋಮಸುಂದರ್, ನವಜೋತ್ ಸಿಂಗ್ ಅವರನ್ನು ಸಮಾಧಾನಪಡಿಸಲು ಮುಂದಾದ್ರು. ಆದ್ರೆ ಸಿಟ್ಟಿನಿಂದಲೇ ಅವನು ಏನು ಬೈಯುತ್ತಿರುತ್ತಾನೆ ಗೊತ್ತಾ… ಅವನ ಮಾತನ್ನೆಲ್ಲಾ ಕೇಳಿಕೊಂಡು ಸುಮ್ಮನಿರಲು ನಾನೇನೂ ಗೌತಮ ಬುದ್ದನಲ್ಲ. ಅವನಿಗೆ ವಾಪಸ್ ಕೊಟ್ಟೆ ಕೊಡುತ್ತೇನೆ ಅಂತ ಏರು ಧ್ವನಿಯಲ್ಲಿ ಹೇಳಿದ್ರಂತೆ.
ದೂರದಿಂದಲೇ ಇದನ್ನೆಲ್ಲಾ ನೋಡುತ್ತಿದ್ದ ದೊಡ್ಡ ಗಣೇಶ್, ಸುಜೀತ್ ಬಳಿ ಬಂದು ಏನಾಯ್ತು ಅಂತ ಕೇಳಿದ್ರಂತೆ. ಆಗ ಸುಮ್ಮನಿರಪ್ಪ. ಎಲ್ಲವೂ ಸರಿ ಹೋಯ್ತು.. ಅಂದ್ರಂತೆ. ಆಗ ದೊಡ್ಡ ಗಣೇಶ್ ಸಿದೂ ಬಳಿ ಬಂದು ಪ್ಯಾಚ್ ಅಪ್ ಬ್ರದರ್ ಅಂದ್ರಂತೆ. ಹಾಗಂತ ದೊಡ್ಡ ಗಣೇಶ್ ಸುಮ್ಮನಿರಲಿಲ್ಲ. ಸಿದೂಗೆ ಮಾತಿನಿಂದ ಅಲ್ಲ…
ತನ್ನ ಬೌಲಿಂಗ್‍ನಿಂದಲೇ ಪಾಠ ಕಲಿಸಿಬಿಡುತ್ತೇನೆ ಅಂತ ತೀರ್ಮಾನ ಮಾಡ್ಕೊಂಡೇ ಬೌಲಿಂಗ್ ದಾಳಿ ಶುರು ಮಾಡಿದ್ರು. ಡೆಡ್ ಪಿಚ್ ನಲ್ಲಿ ಅಂದು ಬೌಲಿಂಗ್ ದಾಳಿ ನಡೆಸಿದ್ದ ದೊಡ್ಡ ಗಣೇಶ್ ಪಂಜಾಬ್‍ಗೆ ಕೊಟ್ಟಂತಹ ಏಟು ಅಂತಿಂಥ ಏಟಲ್ಲ. ನೋಡ ನೋಡುತ್ತಿದ್ದಂತೆ ಪಂಜಾಬ್ ಬ್ಯಾಟ್ಸ್ ಮೆನ್‍ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ದಾರಿ ಹಿಡಿದಿದ್ರು. ಅದೂ ಕೂಡ ತನ್ನ ರಿವರ್ಸ್ ಸ್ವಿಂಗ್ ಬೌಲಿಂಗ್ ಮೂಲಕ. ಆರು ವಿಕೆಟ್ ಉರುಳಿಸಿದ್ದ ದೊಡ್ಡ ಗಣೇಶ್ ಪಂಜಾಬ್ ತಂಡವನ್ನು 90 ರನ್‍ಗೆ ಆಲೌಟ್ ಮಾಡುವಂತೆ ಮಾಡಿದ್ದರು.
ಸೋಲನ್ನು ಒಪ್ಪಿಕೊಳ್ಳಲು ರೆಡಿ ಇಲ್ಲದ ದೊಡ್ಡ ಗಣೇಶ್‍ಗೆ ಗೆಲುವೇ ಮುಖ್ಯವಾಗಿರುತ್ತಿತ್ತು. ಅದಕ್ಕಾಗಿ ಏನು ಬೇಕಾದ್ರೂ ಮಾಡುತ್ತಿದ್ದರಂತೆ. ಜೀವ ಬಿಟ್ಟು ಬೌಲಿಂಗ್ ಮಾಡುತ್ತಿದ್ದ ದೊಡ್ಡ ಗಣೇಶ್, ಎದುರಾಳಿ ತಂಡದ ಜೀವವನ್ನೇ ಬಿಟ್ಟು ಬೌಲಿಂಗ್ ಮಾಡುತ್ತಿದ್ದರಂತೆ. ವಕಾರ್ ಗುರು, ವಕಾರ್ ಗುರು ಅಂತ ಹೇಳಿಕೊಂಡೇ ರಿವರ್ಸ್ ಸ್ವಿಂಗ್ ಮಾಡುವ ಕಲೆಯನ್ನು ದೊಡ್ಡ ಗಣೇಶ್ ಚೆನ್ನಾಗಿ ಕರಗತ ಮಾಡಿಕೊಂಡಿದ್ದರು. ಅಂತಹ ಸ್ವಭಾವವನ್ನು ದೊಡ್ಡ ಗಣೇಶ್ ಹೊಂದಿದ್ದರು ಅಂತ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‍ರೌಂಡರ್ ವಿಜಯ್ ಭಾರದ್ವಾಜ್ ಅವರು ಸಾಕ್ಷಾ ಟಿವಿ ಡಾಟ್ ಕಾಮ್ ನ ವಿಶೇಷ ಕಾರ್ಯಕ್ರಮ ಸೂಪರ್ ಓವರ್ ನೇರ ಪ್ರಸಾರದಲ್ಲಿ ನೆನಪಿಸಿಕೊಂಡಿದ್ದಾರೆ.a








