ನವದೆಹಲಿ : ಬಂಡಾಯದ ಬಾವುಟ ಹಾರಿಸಿ ಡಿಸಿಎಂ ಸ್ಥಾನ ಹಾಗೂ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಸಚಿನ್ ಪೈಲಟ್ ಸದ್ಯದಲ್ಲೇ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಈ ವದಂತಿಗೆ ಸ್ವತಃ ಅವರೇ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿನ್, ನಾನು ಬಿಜೆಪಿಗೆ ಸೇರುತ್ತಿಲ್ಲ. ಬಿಜೆಪಿಗೆ ಸೇರುವ ಯಾವುದೇ ಯೋಚನೆ ಮಾಡಿಲ್ಲ. ಬಿಜೆಪಿ ಜೊತೆ ಸಂಬಂಧ ಕಲ್ಪಿಸಿ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಇನ್ನೂ ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದೇನೆ. ಭವಿಷ್ಯದ ಯೋಜನೆ ಬಗ್ಗೆ ಇನ್ನೂ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ. ನಾನು ರಾಜಸ್ಥಾನದ ಜನರ ಸೇವೆ ಮಾಡಲು ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.








