ಹೊಸದಿಲ್ಲಿ, ಜೂನ್ 6 : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯವು ಕೊರೋನ ಸೋಂಕು ವೈರಸ್ ನ ಬಿಕ್ಕಟ್ಟು ಮತ್ತು ಆಂಫಾನ್ ಚಂಡಮಾರುತದಿಂದ ಉಂಟಾದ ವಿನಾಶದ ಬಗ್ಗೆ ಚಿಂತಿತವಾಗಿದ್ದರೆ ಪ್ರತಿಪಕ್ಷ ಬಿಜೆಪಿ ಮಾತ್ರ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಕೆಳಗಿಳಿಸಬೇಕು ಎಂದು ನಾನು ಯಾವತ್ತೂ ಹೇಳಲಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು ನಾವು ಕೊರೊನಾ ಸೋಂಕು ಮತ್ತು ಅಂಫಾನ್ ಚಂಡಮಾರುತದ ವಿರುದ್ಧ ಹೋರಾಡುತ್ತಿರುವಾಗ ಮತ್ತು ಜೀವಗಳನ್ನು ಉಳಿಸಲು ನೋಡುತ್ತಿರುವಾಗ ಕೆಲವು ರಾಜಕೀಯ ಪಕ್ಷಗಳು ನಮ್ಮ ಸರ್ಕಾರವನ್ನು ತೆಗೆದು ಹಾಕುವಂತೆ ಕೇಳುತ್ತಾ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಾ ರಾಜಕೀಯ ಮಾಡಲು ಇದು ಸಮಯವೇ? ನಾವು ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ಸೋಂಕು ಮತ್ತು ರಾಜಕೀಯ ಪಿತೂರಿಗಳ ವಿರುದ್ಧ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು. ಪಶ್ಚಿಮ ಬಂಗಾಳವು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಮತ್ತು ಪಿಂಚಣಿದಾರರಿಗೆ ಪಿಂಚಣಿಯನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು ಹಾಗೂ ಚಂಡಮಾರುತದಿಂದ ಹಾನಿಗೊಳಗಾದವರಿಗೆ ಸಹಾಯ ಮಾಡುವುದು ಸೇರಿದ್ದು, ಈಗಾಗಲೇ ಚಂಡಮಾರುತದಿಂದ ನಷ್ಟ ಅನುಭವಿಸಿದ 25 ಲಕ್ಷ ರೈತರು ಮತ್ತು ಮನೆಗಳನ್ನು ಕಳೆದುಕೊಂಡ 5 ಲಕ್ಷ ಕುಟುಂಬಗಳಿಗೆ ಪರಿಹಾರ ದೊರೆತಿದೆ ಎಂದು ಹೇಳಿದರು.








