ಉಡುಪಿ : ನನ್ನ ವ್ಯಕ್ತಿತ್ವಕ್ಕೆ ಕಳಂಕ ತರುವ ಮತ್ತು ಸಮಾಜದಲ್ಲಿ ಸಾಮಾಜಿಕ ಶಾಂತಿ ಭಂಗಗೊಳಿಸುವ ಉದ್ದೇಶದಿಂದ ದುಷ್ಕರ್ಮಿಗಳು ನನ್ನ ಹೆಸರಲ್ಲಿ ನಕಲಿ ಟ್ವೀಟ್‌ಗಳನ್ನು ಹರಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಆರೋಪಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಒತ್ತಾಯಿಸಿದ್ದಾರೆ. ಮೇ 24 ರಂದು ನಿಶಾಂತ್ ಎಂಬೋರು ಪಾಣಿಮಂಗಳೂರಿನಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಆ ವೇಳೆ ಸ್ಥಳದಲ್ಲಿದ್ದ ನಾಲ್ವರು ಮುಸ್ಲಿಂ ಯುವಕರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲ ನೀಡದೆ ಆತ ಸಾವನ್ನಪ್ಪಿದ್ದಾನೆ.
ಆದರೆ ಈ ಕುರಿತಂತೆ ಶೋಭಾ ಕರಂದ್ಲಾಜೆ ಮಾಡಿದ್ದರೆನ್ನಲಾದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಸ್ ಆಗಿತ್ತು. ಟ್ವೀಟ್ ನಲ್ಲಿ ಹಿಂದೂ ಸಂಘಟನೆಗೆ ಸೇರಿದ ಕಲ್ಲಡ್ಕದ ನಿಶಾಂತ್ ಎನ್ನುವ ಯುವಕನನ್ನು ಜಿಹಾದಿಗಳು ಹತ್ಯೆ ಮಾಡಿದ್ದಾರೆ. ಹೀಗಾಗಿ ಸಂಬಂಧಪಟ್ಟ ಜಿಹಾದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಅಮಿತ್ ಷಾ ಅವರನ್ನು ಕೇಳಿಕೊಂಡಿದ್ದೇನೆ ಎಂದು ಬರೆಯಲಾಗಿತ್ತು. ಈ ವಿಚಾರವಾಗಿ ಭಾರಿ ಟೀಕೆಗಳು ಕೇಳಿ ಬಂದ ಹಿನ್ನೆಲೆ ಈ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರತಿಕ್ರಿಯೆ ನೀಡಿದ್ದು, ಆ ಟ್ವೀಟ್ ನಕಲಿ ಎಂದಿದ್ದಾರೆ. “ನಾನು ಈ ರೀತಿಯ ಯಾವುದೇ ಹೇಳಿಕೆ ಅಥವಾ ಟ್ವೀಟ್ ಮಾಡಿರುವುದಿಲ್ಲ, ಎಡಿಟೆಡ್ ಟ್ವೀಟನ್ನು ನನ್ನದೆಂದು ಬಿಂಬಿಸಲು ಪ್ರಯತ್ನಿಸಿರುತ್ತಾರೆ.
https://twitter.com/ShobhaBJP/status/1264570893688205313?s=20
“ಕಿಡಿಗೇಡಿಗಳ ಈ ಕೃತ್ಯಕ್ಕೆ ಸಾಥ್ ನೀಡುವ & ಸಾರ್ವಜನಿಕ ವಲಯದಲ್ಲಿ ವದಂತಿಗಳ ಮೂಲಕ ಸಾಮರಸ್ಯ-ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸರಿಗೆ ಸೂಚಿಸಲಾಗಿದೆ ” ಎಂದಿದ್ದಾರೆ. ಇನ್ನು ತನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ‘ಜಿಹಾದಿಗಳು’ ನಡೆಸಿದ ಪಿತೂರಿಗೆ ಕಾಂಗ್ರೆಸ್ ಮುಖಂಡರು ನೀಡಿದ ಬೆಂಬಲವು ಅವರ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ಈ ಕೃತ್ಯದ ಹಿಂದಿನ ಅಪರಾಧಿಗಳನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಎಂದು ಶೋಭಾ ಕರಂದ್ಲಾಜೆ ಅವರು ಒತ್ತಾಯಿಸಿದ್ದಾರೆ.








