ಕಾಗೋಡು ತಿಮ್ಮಪ್ಪ ಎನ್ನುವ ಪ್ರಭಾವಿ ಸಮಾಜವಾದಿ ಜ್ಯಾತ್ಯಾತೀತ ನಾಯಕ ಈಗಲಾದರೂ ತಪ್ಪು ತಿದ್ದಿಕೊಳ್ಳದಿದ್ದರೇ ಇತಿಹಾಸವೂ ಅವರನ್ನು ಕ್ಷಮಿಸುವುದಿಲ್ಲ:
‘ಏನೋ ಹುಡುಗಾ ನೀನು ತ್ಯಾಗರ್ತಿ ರಾಯರ ಮೊಮ್ಮಗನೇನೋ’ ಅಂದಿದ್ದರು ಅವರು. ಅವರನ್ನು ಮೊದಲ ಬಾರಿಗೆ ಸಂದರ್ಶಿಸಿದ್ದೆ ಆಗ ಪತ್ರಕರ್ತನಾಗಿ ಅಂಬೆಗಾಲಿಟ್ಟ ದಿನ. ಅಪ್ಪನಿಗೆ ಕೆಲಸ ಕೊಡಿಸಿದ್ದರು ಅನ್ನೋ ಋಣಕ್ಕೆ ಅಪ್ಪ ಪ್ರತೀ ಚುನಾವಣೆಗೂ ಅವರಿಗೆ ಮತ ಹಾಕಿದ್ದಾನೆ. ಅವರದ್ದು ಅನ್ನದ ಋಣ. ಅಜ್ಜ ಬದುಕಿದ್ದಾಗ ಅವರೊಂದಿಗೆ ನಿಕಟ ಒಡನಾಟ ಹೊಂದಿದ್ದ ನಾಯಕ ಅವರು. ಅಂದು ಅಜ್ಜ ಒಪ್ಪಿದ್ದರೇ ಉಳುವವನೇ ಹೊಲದೊಡೆಯ ಕಾಯ್ದೆಯಲ್ಲಿ ಒಂದಷ್ಟು ತುಂಡು ಭೂಮಿ ಉಳಿಯುತ್ತಿತ್ತೇನೋ. ‘ರಾಯರಿಗೆ ಒಂದಷ್ಟು ಜಮೀನು ಉಳಿಸಿಕೊಡಬೇಕಿತ್ತು’ ಅನ್ನುವ ಕಳಕಳಿ ಅವರಿಗಿತ್ತು. ಅದನ್ನು ಒಮ್ಮೆ ನನ್ನೊಂದಿಗೆ ಮುಕ್ತವಾಗಿ ಅವರು ಹಂಚಿಕೊಂಡಿದ್ದರು. ಅವರು ಸಾಗರದ ಖ್ಯಾತ ಸಮಾಜವಾದಿ ಪ್ರಭಾವಿ ಜನನಾಯಕ ಸನ್ಮಾನ್ಯ ಕಾಗೋಡು ತಿಮ್ಮಪ್ಪ.
ತಮ್ಮ ಸಮುದಾಯದ ಬಡ ರೈತರಿಗೆ ಹೋರಾಡಿ ಜಮೀನು ಕೊಡಿಸಿದರೇನೋ ನಿಜ. ಆದರೆ ಜಮೀನಿನಲ್ಲಿ ದುಡಿಯುವುದನ್ನು ಬಿಟ್ಟು ಅವರ ಕಚೇರಿಯಲ್ಲ ಕಾಲಹರಣ ಮಾಡುತ್ತಿದ್ದರು ಅವರದ್ದೇ ಈಡಿಗ ಸಮುದಾಯದ ಹುಡುಗರು. ಇದು ಅವರಿಗೆ ಹಿಡಿಸುತ್ತಿರಲಿಲ್ಲ.. ‘ಏಯ್ ಹುಡುಗ್ರಾ ಹೋಗ್ರೋ ಹೊಲದಲ್ಲಿ ಕೆಲಸ ಮಾಡ್ರಾ’ ಎಂದು ಬಯ್ದು ಕಳಿಸುತ್ತಿದ್ದರು. ಅವರು ಸದಾ ಶ್ರಮಜೀವಿಗಳನ್ನು ಮೆಚ್ಚುತ್ತಿದ್ದರು.
ಅವರನ್ನು ವಿರೋಧಿಗಳೂ ಕೆಲವು ಕಾರಣಗಳಿಗೆ ಇಷ್ಟ ಪಡಲೇಬೇಕು. ಅವರು ಕಾಗೋಡು ತಿಮ್ಮಪ್ಪ.
‘ಸಕ್ರಿಯ ರಾಜಕಾರಣದಿಂದ ನಿವೃತ್ತಿ’ ಎನ್ನುವ ಹೇಳಿಕೆ ನೀಡಿದ್ದರೂ ರಾಜಕೀಯದ ಮೋಹ ಬಿಡಲಿಲ್ಲ ಕಾಗೋಡು:
ರಾಜಕೀಯ ಬದುಕನ್ನು ಕೊನೆಗಾಣಿಸಿದ ಹಿರಿಯ ಸಮಾಜವಾದಿ ನಾಯಕ. ಹೋರಾಟದ ನೆಲೆಯಿಂದ ರಾಜಕಾರಣಕ್ಕೆ ಬಂದ ಜನನಾಯಕನ ರಾಜಕೀಯ ನಿವೃತ್ತಿ. ಸುದೀರ್ಘ 5 ದಶಕಗಳ ರಾಜಕೀಯ ಬದುಕಿಗೆ ಮಂಗಳ ಹಾಡಿದ ಹಿಂದುಳಿದ ವರ್ಗಗಳ ನೇತಾರ. ಹೀಗಂತ ನಾವೆಲ್ಲಾ ಪತ್ರಕರ್ತರು ಕಾಗೋಡು ತಿಮ್ಮಪ್ಪ ಎನ್ನುವ ಮಲೆನಾಡಿನ ಜನನಾಯಕನ ನಿವೃತ್ತಿ ಘೋಷಣೆಗಳನ್ನು ಹೆಡ್ ಲೈನ್ ಮಾಡಿ ಸುದ್ದಿ ಮಾಡಿದೆವು. ಮೂರು ವರ್ಷಗಳ ಹಿಂದೆ ಕಾಗೋಡು ರಾಜಕಾರಣದಿಂದ ನಿವೃತ್ತಿ ಪಡೆಯಲು ಇಚ್ಛಿಸಿದ್ದು ನಿಜ ಎಂದು ಒಪ್ಪಿಕೊಳ್ಳುತ್ತಾರೆ ಅವರ ನಿಕಟವರ್ತಿಗಳು. ಆದರೆ ರಾಜಕಾರಣ ಅವರನ್ನು ಬಿಡಲಿಲ್ಲ. ಜಾತಿಯ ದೃತರಾಷ್ಟ್ರ ವ್ಯಾಮೋಹವೂ ಜ್ಯಾತ್ಯಾತೀತ ನಾಯಕನನ್ನು ಬಿಡಲಿಲ್ಲ ಎನ್ನುತ್ತಾರೆ ಕಾಗೋಡು ತಿಮ್ಮಪ್ಪನವರ ವಿರೋಧಿಗಳು. ಇದನ್ನು ತೀರಾ ತಳ್ಳಿ ಹಾಕಲೂ ಸಾಧ್ಯವಿಲ್ಲ. ಕಾಗೋಡು ತಮ್ಮ ಎರಡನೇ ತಲೆಮಾರಿನ ನಾಯಕರನ್ನು ಬೆಳೆಸಲಿಲ್ಲ ಅನ್ನುವುದು ಅವರ ಮೇಲಿನ ದೊಡ್ಡ ಆಪಾದನೆ. ತಮ್ಮ ಜಾತಿಯವನೇ ತಮ್ಮ ಸೋದರಳಿಯನೇ ಆದ ಬೇಳೂರು ಗೋಪಾಲಕೃಷ್ಣನ ಮೇಲಿರುವ ಪ್ರೀತಿ ತಮ್ಮ ಶಿಷ್ಯರಾದ ಬಿ.ಆರ್ ಜಯಂತ ಮತ್ತು ತಿ.ನಾ ಶ್ರೀನಿವಾಸ್ ಮೇಲೆ ಯಾಕಿಲ್ಲ? ಈ ಪ್ರಶ್ನೆಗೆ ಖುದ್ದು ಕಾಗೋಡು ತಿಮ್ಮಪ್ಪನವರೂ ಈ ವರೆಗೆ ಉತ್ತರಿಸಿಲ್ಲ.
ಕಾಗೋಡು ತಿಮ್ಮಪ್ಪನವರ ರಾಜಕಾರಣದ ಹಿನ್ನೆಲೆ:
ಶ್ರೀಮಂತ ಭೂಮಾಲಿಕರ ವಿರುದ್ಧ ಬಡ ಗೇಣಿದಾರರ ಹೋರಾಟವೇ ಅವರ ಬದುಕನ್ನು ನಿರ್ಧರಿಸಿದ ತಿರುವು. ಅವರು ಐದು ದಶಕಗಳಿಗೂ ಹೆಚ್ಚು ರಾಜಕಾರಣ ಮಾಡಿದ್ರೂ ಸಿಕ್ಕಿದ್ದು ಮಿಶ್ರಫಲ. ರಾಜಕಾರಣದ ಹಿರಿತನವಿದ್ದರೂ ಸಿಗುವ ಮಾನ್ಯತೆ ಮಾತ್ರ ಸಿಗಲೇ ಇಲ್ಲ. ಇದು ಕಾಗೋಡು ತಿಮ್ಮಪ್ಪನವರ ರಾಜಕೀಯ ಬದುಕಿನ ಲುಕ್ ಬ್ಯಾಕ್ ಕಥೆ.
ರಾಜ್ಯದ ಪ್ರಮುಖ ಭೂ ಹೋರಾಟವಾದ ಕಾಗೋಡು ಚಳುವಳಿಯ ಮೂಲಕ ರಾಜ್ಯ ರಾಜಕಾರಣದ ಸುದ್ದಿಯಾದ ಸಮುದಾಯ ಮಲೆನಾಡಿನ ದೀವರು ಅಥವಾ ಈಡಿಗರು. ಈ ಸಮುದಾಯದ ಪ್ರಭಾವಿ ನಾಯಕರಲ್ಲಿ ಒಬ್ಬರು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಆದ್ರೆ ಇನ್ನೊಬ್ಬರು ಕಾಗೋಡು ತಿಮ್ಮಪ್ಪ. ಗೇಣಿದಾರರ ಹೋರಾಟದಿಂದ ರಾಜಕೀಯವನ್ನು ಕರ್ಮಕ್ಷೇತ್ರವನ್ನಾಗಿಸಿಕೊಂಡ ಕಾಗೋಡು ತಿಮ್ಮಪ್ಪ, ಉಳುವವನೆ ಹೊಲದೊಡೆಯ ಅನ್ನುವ ಇಂದಿರಾ-ಅರಸು ಯೋಜನೆ ಭೂಮಿ ಕ್ರಾಂತಿ ಯೋಜನೆಯಲ್ಲಿ ಸಕ್ರಿಯರಾಗಿದ್ದವರು. ಬಗರ್ ಹುಕುಂ ಹಾಗೂ ಅರಣ್ಯ ಭೂಮಿ ಹಕ್ಕು ಪತ್ರ ಹೋರಾಟ ನಡೆಸಿ ತಮ್ಮದು ಹೋರಾಟ ಪ್ರಣೀತ ರಾಜಕಾರಣ ಎಂದು ನಿರೂಪಿಸಿದವರು. ಲೋಹಿಯಾವಾದಿ, ಸಮಾಜವಾದಿ, ಶಾಂತವೇರಿ ಗೋಪಾಲಗೌಡರು ಹಾಗೂ ಕೋಣಂದೂರು ಲಿಂಗಪ್ಪನವರ ಒಡನಾಡಿಯಾಗಿದ್ದವರು ಅವರು.
ಅಂತಹ ಪ್ರಭಾವಿ ನಾಯಕ ಕಾಗೋಡು ತಿಮ್ಮಪ್ಪನವರ ದೀರ್ಘಕಾಲದ ರಾಜಕೀಯ ಬದುಕು ಕೊನೆಯಾಗ್ತಿದೆ. ಇನ್ನು ತಾವು ಸಕ್ರಿಯ ರಾಜಕಾರಣದಲ್ಲಿರೋದಿಲ್ಲ. ತಮಗೆ ಹೋರಾಟ ಮಾಡುವ ಶಕ್ತಿಯಾಗಲೀ, ಉತ್ಸಾಹವಾಗಲೀ, ಉಮೇದಾಗಲೀ ಇಲ್ಲ. ಹಾಗಾಗಿ ತಾವಿನ್ನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಕಾಗೋಡು ಘೋಷಿಸಿದಾಗ ಇಡೀ ರಾಜ್ಯವೇ ಅವರ ನಿರ್ಧಾರವನ್ನು ಮೆಚ್ಚಿ ಅಹುದಹುದೆಂದಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆ ನಂತರದ ಅವರ ವರ್ತನೆಗಳು ಅವರನ್ನು ಕಟಕಟೆಯಲ್ಲಿ ನಿಲ್ಲಿಸಿದೆ. ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಮಾತ್ರಕ್ಕೆ ಅವರ ಜವಾಬ್ದಾರಿ ಕೊನೆಯಾಯಿತಾ? ಎರಡನೇ ತಲೆಮಾರಿನ ಬದ್ಧತೆಯ ಜನನಾಯಕರಾದ ಮತ್ತು ಕಾಗೋಡು ತಿಮ್ಮಪ್ಪನವರ ಅತ್ಯಂತ ನಿಷ್ಟ ಅನುಯಾಯಿಗಳಾದ ತಿ.ನಾ ಶ್ರೀನಿವಾಸ್ ಮತ್ತು ಬಿ.ಆರ್ ಜಯಂತ್ ರವರನ್ನು ಬೆಳೆಸಲು ಕಾಗೋಡು ಯಾಕೆ ಪ್ರಯತ್ನಿಸಲಿಲ್ಲ? ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿದು ಕೊನೆಗೆ ವಿಧಿಯಿಲ್ಲದೇ ಕಾಂಗ್ರೆಸ್ ಬಾಗಿಲು ತಟ್ಟಿದ ಬೇಳೂರು ಗೋಪಾಲಕೃಷ್ಣರಿಗೆ ಬೆಂಬಲ ನೀಡಿದ್ದೇಕೆ? ಇತ್ಯಾದಿ ಪ್ರಶ್ನೆಗಳಿಗೆ ಕಾಗೋಡು ಇನ್ನೂ ಉತ್ತರ ನೀಡಿಲ್ಲ.
ಕಾಗೋಡು ತಿಮ್ಮಪ್ಪನವರ ಸುದೀರ್ಘ ಹೋರಾಟದ ರಾಜಕಾರಣದ ಬದುಕು ಸಾಮಾನ್ಯದ್ದಲ್ಲ:
ಕಾಗೋಡು ತಿಮ್ಮಪ್ಪ ಸುದೀರ್ಘ 5 ದಶಕಗಳಿಗೂ ಹೆಚ್ಚು ರಾಜಕಾರಣವನ್ನು ಅದಕ್ಕಿಂತ ಹೆಚ್ಚಿನ ಹೋರಾಟವನ್ನು ಮಾಡಿಕೊಂಡು ಬಂದವರು. ಕಾಗೋಡು ಅನ್ನುವ ಸಣ್ಣ ಹಳ್ಳಿ ಭವಿಷ್ಯದಲ್ಲಿ ಜನಪ್ರಿಯವಾಗಿ ಉಳಿಯುವುದು ಎರಡೇ ಕಾರಣಕ್ಕೆ. ಒಂದು ಗೇಣಿದಾರರ ವಿರುದ್ಧದ ರೈತರ ಹೋರಾಟ ಕಾಗೋಡು ಸತ್ಯಾಗ್ರಹವಾದ್ರೆ ಇನ್ನೊಂದು ಕಾಗೋಡು ತಿಮ್ಮಪ್ಪ. 1932ರ ಸೆಪ್ಟೆಂಬರ್ 10ರಂದು ಸವಾಜಿ ಬೀರಾನಾಯ್ಕ ಹಾಗೂ ಬೈರಮ್ಮ ದಂಪತಿಗಳ 3ನೆಯ ಪುತ್ರನಾಗಿ ಹುಟ್ಟಿದ ಕಾಗೋಡು ತಿಮ್ಮಪ್ಪ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದು ಹಿರೇನೆಲ್ಲೂರಿನಲ್ಲಿ ಹಾಗೂ ಸಾಗರದಲ್ಲಿ. ಆ ಬಳಿಕ ಬಿಕಾಂ ಕಲಿತು ಎಲ್ಎಲ್ ಬಿ ಪದವಿ ಪಡೆದುಕೊಂಡಿದ್ದು ಬೆಂಗಳೂರಿನಲ್ಲಿ. ವಕೀಲರಾಗಿ ವೃತ್ತಿಜೀವನ ಆರಂಭಿಸಿದ್ದು ಹಾಗೂ ಕಾಗೋಡು ಹೋರಾಟ, ಸೋಶಿಯಲಿಸ್ಟ್ ಪಾರ್ಟಿ, ರಾಜಕೀಯ ಜೀವನ ಶುರುಮಾಡಿದ್ದು ಮಾತ್ರ ಮತ್ತೆ ಸಾಗರದಲ್ಲಿ. ಕಾಗೋಡು ತಿಮ್ಮಪ್ಪನವರ ಹೋರಾಟ ಹಾಗೂ ರಾಜಕೀಯದ ಕರ್ಮಭೂಮಿ ಸಮಾಜವಾದಿ ನೆಲೆಗಳ ನೆಲ ಸಾಗರ.
ಕಾಗೋಡು ರಾಜಕೀಯ ಜೀವನದಾರಂಭದಲ್ಲಿ ಸತತ ಎರಡು ಬಾರಿ ಮುಖಭಂಗ ಅನುಭವಿಸಿದ್ದರು. 1962ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿಕಾಂತಪ್ಪ ವಿರುದ್ಧ 3 ಸಾವಿರ ಚಿಲ್ಲರೆ ಓಟುಗಳಿಂದ ಸೋತ ಕಾಗೋಡು, 1967ರ ಚುನಾವಣೆಯಲ್ಲೂ ಸೋಲಿನ ರುಚಿ ಕಂಡರು. ಆ ಚುನಾವಣೆಯಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಕೆ.ಎಚ್. ಶ್ರೀನಿವಾಸ್ ವಿರುದ್ಧ ಸೋಶಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿದ್ದ ಕಾಗೋಡು ಕೇವಲ 749 ಮತಗಳ ಅಂತರದಿಂದ ಪರಾಭವ ಹೊಂದಿದ್ದರು. ಆದರೆ ಅದಾಗಲೇ ಜನಪ್ರಿಯ ನಾಯಕರಾಗಿದ್ದ ಕಾಗೋಡು, ಸಾಗರ ತಾಲ್ಲೂಕು ಬೋರ್ಡ್ ಚುನಾವಣೆಯಲ್ಲಿ ಒಟ್ಟು 15 ಸ್ಥಾನಗಳಲ್ಲಿ 12ರಲ್ಲಿ ಜಯ ಪಡೆದು ಸೋಶಿಯಲಿಸ್ಟ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು.
ಈ ವೇಳೆ ಸಾಗರ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದರು. ಕಾಗೋಡು ತಿಮ್ಮಪ್ಪ ಬಡ ಗೇಣಿದಾರರ, ಸಣ್ಣ ಹಿಡುವಳಿಯ ರೈತರ, ಕೃಷಿ ಕಾರ್ಮಿಕರ, ಧ್ವನಿ ಇಲ್ಲದ ಹರಿಜನರ, ಗಿರಿಜನರ ಪರವಾದ ಜನನಾಯಕರಾಗಿದ್ದು ಆಗಲೇ. 1972ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಲ್.ಟಿ ತಿಮ್ಮಪ್ಪ ಹೆಗಡೆ ಅವರನ್ನು ಪರಾಭವಗೊಳಿಸಿದ ಕಾಗೋಡು ತಿಮ್ಮಪ್ಪ ಸೋಷಿಯಲಿಸ್ಟ್ ಪಕ್ಷದಿಂದ ಮೊದಲ ಬಾರಿಗೆ ಶಾಸನಸಭೆಗೆ ಆಯ್ಕೆಯಾದ್ರು. ಅದರ ನಂತರದ 78ರ ಚುನಾವಣೆಯಲ್ಲಿ ಜನತಾ ಪಕ್ಷದ ಟಿಕೆಟ್ ಪಡೆದ ಕಾಗೋಡು ತಿಮ್ಮಪ್ಪ ಕಾಂಗ್ರೆಸ್ನ ತಿಮ್ಮಪ್ಪ ಹೆಗ್ಡೆ ವಿರುದ್ಧ ಸೋಲನ್ನಭವಿಸಿದ್ರು.
1973ರಲ್ಲಿ ಕಾಗೋಡು ತಿಮ್ಮಪ್ಪ, ಸಂಡೂರು ಭೂ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದ್ದರು. ಅದರ ಫಲಶೃತಿಯೇ ಸಂಡೂರು ಇನಾಂ ರದ್ಧತಿ. 74ರಲ್ಲಿ ಭೂ ಸುದಾರಣಾ ಶಾಸನ ರೂಪಿಸುವ ಮೊದಲು ರಚನೆಯಾಗಿದ್ದ ಜಾಯಿಂಟ್ ಸೆಲೆಕ್ಟ್ ಕಮಿಟಿಯಲ್ಲಿ ಕಾಗೋಡು ತಿಮ್ಮಪ್ಪನವರೂ ಓರ್ವ ಸದಸ್ಯರಾಗಿದ್ದರು. ಹಾಗೆ ಜಾರಿಗೆ ಬಂದಿದ್ದೇ ಕ್ರಾಂತಿಕಾರಕ ಭೂ ಸುಧಾರಣಾ ಕಾಯಿದೆ. ಕಾಗೋಡು ಕಾಂಗ್ರೆಸ್ ಸೇರ್ಪಡೆಗೊಂಡಿದ್ದು 1980ರಲ್ಲಿ. ಆದ್ರೆ ಗುಂಡೂರಾವ್ ನೆರವಿನಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ ತಿಮ್ಮಪ್ಪ, ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷರಾದ್ರು. ಆನಂತರ ಅರಣ್ಯ ಸಚಿವರೂ ಆದ್ರು ಹಾಗೂ ವಿಧಾನ ಪರಿಷತ್ತಿನ ಸಭಾನಾಯಕರಾಗಿಯೂ ಆಯ್ಕೆಯಾದ್ರು.
ಗುಂಡೂರಾವ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾದ ತಿಮ್ಮಪ್ಪ, 1989ರ ವಿಧಾನ ಪರಿಷತ್ ಚುನಾವಣೆಯಲ್ಲೂ ಅತ್ಯಧಿಕ ಬಹುಮತಗಳಿಂದ ಆರಿಸಿ ಬಂದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟಿಲ್ ತಿಮ್ಮಪ್ಪನವರನ್ನು ರಾಜ್ಯ ಗೃಹಮಂಡಳಿಯ ಅಧ್ಯಕ್ಷರನ್ನಾಗಿಸಿದ್ರು. ವೀರಪ್ಪ ಮೊಯಿಲಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ತಿಮ್ಮಪ್ಪ, ಹಿಂದುಳಿದ ವರ್ಗಗಳ, ಆದಿವಾಸಿಗಳ, ಹರಿಜನ, ಗಿರಿಜನ ಸಮುದಾಯಗಳಿಗೆ ಹತ್ತಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ತರುವ ಮೂಲಕ ಹಿಂದುಳಿದ ಸಮುದಾಯಗಳ ಆಶಾಕಿರಣವೆನಿಸಿಕೊಂಡ್ರು. ಮುಂದಿನ 1994ರ ಹಾಗೂ 99ರ ಚುನಾವಣೆಯಲ್ಲಿ ದಿಗ್ವಿಜಯ ಮುಂದುವರೆಸಿ ಸಾಗರ ಕ್ಷೇತ್ರದ ಪ್ರಶ್ನಾತೀತ ನಾಯಕರೆನಿಸಿಕೊಂಡ್ರು.
ಆದ್ರೆ ಸತತ ಗೆಲುವಿನಲ್ಲಿ ಮೈಮರೆತಿದ್ದ ಕಾಗೋಡು ತಿಮ್ಮಪ್ಪನವರಿಗೆ ಮತ್ತೆ ಏಳಲಾರದಷ್ಟು ದೊಡ್ಡ ಪೆಟ್ಟು ಕೊಟ್ಟಿದ್ದು 2004ರ ಚುನಾವಣೆ. ಅದಾದ ನಂತರ 2008ರ ಚುನಾವಣೆಯಲ್ಲೂ ಅಳಿಯ ಗೋಪಾಲಕೃಷ್ಣ ಬೇಳೂರ್ ವಿರುದ್ಧ ಸೋಲನ್ನು ಅನುಭವಿಸಿದ್ರು ಕಾಗೋಡು. ಇನ್ನೇನು ಕಾಗೋಡು ರಾಜಕೀಯ ಬದುಕೇ ಸಮಾಪ್ತಿಯಾಯ್ತು ಅನ್ನುವ ಮಾತುಗಳು ಕೇಳಿ ಬರುವಾಗಲೇ 2013ರ ಚುನಾವಣೆಯಲ್ಲಿ ಮತ್ತೆ ಆರಿಸಿ ಬಂದು ತಮಗಿನ್ನೂ ಹೋರಾಡುವ ಸಾಮರ್ಥ್ಯವಿದೆ ಎಂದು ನಿರೂಪಿಸಿದ್ರು. ಸಿದ್ದರಾಮಯ್ಯ ಸರ್ಕಾರದಲ್ಲಿ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ ಕಾಗೋಡು ತಿಮ್ಮಪ್ಪ ಮುಂದೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಂದಾಯ ಸಚಿವರಾಗಿಯೂ ಕೆಲಸ ಮಾಡಿದ್ರು.
ಅನಾರೋಗ್ಯದ ಕಾರಣವೊಡ್ಡಿ 2018ರ ರಾಜ್ಯ ವಿಧಾನಸಭೆ ಚುನಾವಣೆಗೆ ತಮ್ಮ ಮಗಳಿಗೆ ಟಿಕೆಟ್ ಕೊಡಲಿಸಲು ಕಾಗೋಡು ತೀವ್ರವಾಗಿ ಪ್ರಯತ್ನಿಸಿದ್ದರು. ಕಾಗೋಡು ತಿಮ್ಮಪ್ಪನವರ ಪುತ್ರಿ ರಾಜನಂದಿನಿಯವರಿಗೆ ಟಿಕೆಟ್ ನಿರಾಕರಿಸಿ ಕಾಗೋಡಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದೇ, ಅವರು ಗೆಲ್ಲುವ ಕುದುರೆ ಅನ್ನುವ ಕಾರಣ ನೀಡಿ. ಆದ್ರೆ ಸಾಗರದ ಆರ್ಎಸ್ಎಸ್ ಹಾಗೂ ಹರತಾಳು ಹಾಲಪ್ಪನವರ ಜಾಯಿಂಟ್ ಖೆಡ್ಡಾ ಆಪರೇಷನ್ನಲ್ಲಿ ಕಾಗೋಡು ತಿಮ್ಮಪ್ಪ ಅನ್ನುವ ವೃದ್ಧ ಆನೆ ಸೋಲು ಅನ್ನುವ ಆಳದ ಹಳ್ಳಕ್ಕೆ ಬಿದ್ದೇ ಬಿಡ್ತು.
ಹೋರಾಟದ ನೆಲೆಯ ಮೂಲಕ ರಾಜಕೀಯಕ್ಕೆ ಬಂದ, ಸಮಾಜವಾದಿ ಹಿನ್ನೆಲೆಯ ಕಾಗೋಡು ತಿಮ್ಮಪ್ಪ ಜನತಾ ಪಕ್ಷದ ಪತನದ ನಂತರ ಕಾಂಗ್ರೆಸ್ ಸೇರ್ಪಡೆಗೊಳ್ಳಲು ಪ್ರಮುಖ ಕಾರಣ ದೇವರಾಜ್ ಅರಸು. ಅರಸುರವರ ಭೂಸುಧಾರಣೆಯ ಜನಪ್ರಿಯ ಹಾಗೂ ದಿಟ್ಟ ಕ್ರಮಗಳಿಗೆ ಮನಸೋತ ತಿಮ್ಮಪ್ಪ ಮುಂದಿನ ದಿನಗಳಲ್ಲಿ ಗುಂಡೂರಾವ್ ಗೆ ಹತ್ತಿರವಾಗಿ, ಮಂತ್ರಿಸ್ಥಾನವನ್ನೂ ಗಳಿಸಿಕೊಂಡಿದ್ದು ಇತಿಹಾಸ. ಆದ್ರೆ ಅವರ ಕಾಂಗ್ರೆಸ್ ಸೇರ್ಪಡೆಯನ್ನು ಖಂಡತುಂಡವಾಗಿ ವಿರೋಧಿಸಿದ್ದು ಅವರದ್ಧೇ ಜಿಲ್ಲೆಯ ಅವರದ್ದೇ ಸಮುದಾಯದ ನಾಯಕ.
ಕಾಗೋಡು ತಿಮ್ಮಪ್ಪ ರಾಜಕೀಯಕ್ಕೆ ಬಂದಿದ್ದೇ ಸತತ ಹೋರಾಟಗಳ ನೆಲೆಯಲ್ಲಿ. 1950ರಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲೇ ತಿಮ್ಮಪ್ಪನವರು ಹೋರಾಟದ ಮುಖ್ಯ ಭೂಮಿಕೆಗೆ ಧುಮಿಕಿದವರು. ಆಗ ನಡೆಯುತ್ತಿದ್ದ ಗೇಣಿದಾರರ ವಿರುದ್ಧದ ಕಾಗೋಡು ಹೋರಾಟ, ಅವರಲ್ಲಿ ಒಬ್ಬ ಸಮಾಜವಾದಿ ನಾಯಕನ ವಿಗ್ರಹ ಕೆತ್ತಿದ ಚಳುವಳಿ. ಕಾಗೋಡು ಚಳುವಳಿಯ ರೂವಾರಿ ಹೆಚ್ ಗಣಪತಿಯಪ್ಪನವರ ಮುಂದಾಳತ್ವದಲ್ಲಿ ಗೇಣಿದಾರರ ಹೋರಾಟ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅದರ ಮುನ್ನೆಲೆಗೆ ಬಂದ ತಿಮ್ಮಪ್ಪನವರು, ಆನಂತರ ಸೊಶಿಯಲಿಸ್ಟ್ ಪಕ್ಷದ ಮೂಲಕ ರಾಜಕೀಯ ಕ್ಷೇತ್ರಕ್ಕೆ ಅಧಿಕೃತ ಪ್ರವೇಶ ಪಡೆದ್ರು.
ಆದ್ರೆ ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಹಾಗೂ ಈಡಿಗ ಸಮುದಾಯ ನಾಯಕತ್ವದ ವಿಚಾರದಲ್ಲಿ ಅಷ್ಟೇ ಅಲ್ಲದೇ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಕಾರಣವಾಗಿಯೂ ಒಬ್ಬ ಪ್ರಭಾವಿ ನಾಯಕ ಕಾಗೋಡು ತಿಮ್ಮಪ್ಪನವರ ವಿರುದ್ಧ ನಿಂತಿದ್ದ. ಸಮಾಜವಾದಿ ಕಾಗೋಡು ಕಾಂಗ್ರೆಸ್ ಸೇರ್ಪಡೆಯನ್ನು ನೇರವಾಗಿ ಖಂಡಿಸಿದ್ದ. ಹಲವು ಸಂದರ್ಭದಲ್ಲಿ ಕಾಗೋಡು ವಿರುದ್ಧ ಬಹಿರಂಗವಾಗಿ ಕೆಂಡಕಾರಿದ್ದ ಆ ನಾಯಕನನ್ನೂ ಶಿವಮೊಗ್ಗ ಜಿಲ್ಲೆಯ ದೀವರು ತಮ್ಮ ನಾಯಕನೆಂದು ಮುಕ್ತವಾಗಿ ಒಪ್ಪಿಕೊಂಡಿದ್ದರು. ಆ ಪ್ರಭಾವಿ ನೇತಾರ ಬೇರಾರೂ ಅಲ್ಲ; ಸೋಲಿಲ್ಲದ ಸರದಾರನೆಂದೇ ಖ್ಯಾತರಾಗಿದ್ದ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ.
ಅತ್ತ ಗುಂಡೂರಾವ್ ಸರ್ಕಾರದಲ್ಲಿ ಕಾಗೋಡು ತಿಮ್ಮಪ್ಪ ಮಂತ್ರಿಯಾದ ಸಂದರ್ಭದಲ್ಲೇ ಇತ್ತ ಬಂಗಾರಪ್ಪ ಕಾಂಗ್ರೆಸ್ ತೊರೆದು ಕ್ರಾಂತಿ ರಂಗ ಅನ್ನುವ ಹೊಸ ಪಕ್ಷ ಕಟ್ಟಿದ್ದರು. ಆನಂತರದ ಚುನಾವಣೆಯಲ್ಲಿ ಶತಾಯಗತಾಯ ಬಂಗಾರಪ್ಪನವರನ್ನು ಸೋಲಿಸಲೇಬೇಕು ಎಂದು ಗುಂಡೂರಾವ್ ಸೊರಬ ಕ್ಷೇತ್ರದಲ್ಲಿ ಬಂಗಾರಪ್ಪ ವಿರುದ್ಧ ಕಾಂಗ್ರೆಸ್ನಿಂದ ಕಾಗೋಡು ತಿಮ್ಮಪ್ಪನವರನ್ನೇ ಸ್ಫರ್ಧಿಯನ್ನಾಗಿಸಿದ್ರು. ಆದ್ರೆ ಸೊರಬದಲ್ಲೇ ಅದಾಗಲೇ ಸೋಲನ್ನೇ ಕಾಣದಿದ್ದ ಬಂಗಾರಪ್ಪನವರ ವಿರುದ್ಧ ಕಾಗೋಡು ಹೀನಾಯ ಸೋಲನ್ನು ಅನುಭವಿಸಿದ್ರು. ಈ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯ ಮತ್ತಷ್ಟು ಕಗ್ಗಂಟಾಯ್ತು.
ಶಿವಮೊಗ್ಗ ರಾಜಕಾರಣದಲ್ಲಿ ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪನವರ ಸಂಬಂಧ ಮೊದಲಿನಿಂದಲೂ ಎಣ್ಣೇ ಸೀಗೇಕಾಯಿಯೇ. ಬಂಗಾರಪ್ಪ ಕಾಂಗ್ರೆಸ್ನಲ್ಲಿ ಪ್ರಭಾವಿಯಾಗಿದ್ದಾಗೆಲ್ಲಾ ಕಾಗೋಡು ತಿಮ್ಮಪ್ಪ ಮೂಲೆಗುಂಪಾಗಿದ್ದರು. 94ರ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪನವರನ್ನು ಸೋಲಿಸಲೆಂದೇ ಬಂಗಾರಪ್ಪ ಸಾಗರದಿಂದ ಸ್ಫರ್ಧಿಸಿದರಾದ್ರೂ, ಕಾಗೋಡು ಜಯಸಾಧಿಸಿದ್ರೆ ಬಂಗಾರಪ್ಪ ಸೋಲಿನ ಕಹಿ ಉಂಡು ಮೂರನೆಯ ಸ್ಥಾನಕ್ಕೆ ಕುಸಿದ್ರು. 2004ರಲ್ಲಿ ಬಂಗಾರಪ್ಪ ಬಿಜೆಪಿ ಸೇರ್ಪಡೆಯಾದಾಗ ಕಾಗೋಡು ತಿಮ್ಮಪ್ಪನವರನ್ನು ಸೋಲಿಸಲು ಅವರ ಅಳಿಯ ಬೇಳೂರು ಗೋಪಾಲಕೃಷ್ಣರನ್ನು ರಾಜಕೀಯವಾಗಿ ಬೆಳಿಸಿದ್ರು. ಆ ಚುನಾವಣೆಯಲ್ಲಿ ಬಂಗಾರಪ್ಪ ಹಣೆದ ವ್ಯೂಹವೇ ಉರುಳಾಗಿ ಕಾಗಡು ತಿಮ್ಮಪ್ಪ ಹೀನಾಯವಾಗಿ ಸೋಲನ್ನು ಅನುಭವಿಸಿದ್ರು.
1980ರ ವಿಧಾನ ಪರಿಷತ್ ಚುನಾವಣೆಯೂ ಸೇರಿದಂತೆ ಕಾಗೋಡು ಈವರೆಗೆ ಸುಮಾರು 13 ಬಾರಿ ನಾಮಪತ್ರ ಸಲ್ಲಿಸಿದ್ದಾರೆ. ಇದು ರಾಜ್ಯ ರಾಜಕೀಯದ ಚರಿತ್ರೆಯಲ್ಲೇ ಅಪರೂಪದ ಸಾಧನೆ. ಸ್ವಾತಂತ್ರ್ಯಾ ನಂತರ ಈವರೆಗೆ ಒಟ್ಟು 14 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ಮೊನ್ನೆ ಮೊನ್ನೆ ನಡೆದ 2018ರ ವಿಧಾನಸಭೆ ಚುನಾವಣೆ 15ನೇ ಚುನಾವಣೆಯಾಗಿತ್ತು. ಅಂದರೆ ರಾಜ್ಯದ ಭಾಗಶಃ ಚುನಾವಣೆಗಳಲ್ಲಿ ಕಾಗೋಡು ನಾಮಪತ್ರ ಸಲ್ಲಿಸಿ ಉಮೇದುವಾರರಾಗಿದ್ದಾರೆ. ಇದು ಕಾಗೋಡು ತಿಮ್ಮಪ್ಪನವರ ರಾಜಕೀಯ ಹಿರಿತನವನ್ನು ತೋರಿಸುತ್ತದೆ.
ಸಾಗರದಲ್ಲಿವೆ ಕಾಗೋಡು ತಿಮ್ಮಪ್ಪನವರ ರಾಜಕೀಯ ಇಚ್ಛಾಶಕ್ತಿಯನ್ನು ನೆನಪಿಸುವ ಹಲವು ನಿದರ್ಶನಗಳು:
ಇಳಿವಯಸ್ಸಿನಲ್ಲೂ ಕಾಗೋಡು ಕ್ರಿಯಾಶೀಲರಾಗೇ ಇದ್ದರು. ಈ ಚುನಾವಣೆಯಲ್ಲಿ ಅವರು ಸೋಲದೇ ಇದ್ದಿದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿರಲಿಲ್ಲ. ಕಾಗೋಡು ತಿಮ್ಮಪ್ಪನವರನ್ನು ಮೆಚ್ಚಿಕೊಳ್ಳಲು ಹಾಗೂ ವಿರೋಧಿಸಲು ಸಾಗರದ ಮಂದಿಗೆ ಅನೇಕ ಕಾರಣಗಳಿವೆ..
I am the servant of people. You are the servant of government. ಮೊದಲು ನನ್ನ ಕೆಲಸ ಮಾಡಿಕೊಡು. ಅದು ಜನರ ಕೆಲಸ. ಹೀಗಂತ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಆರ್ಭಟಿಸುತ್ತಿದ್ದರು ಕಾಗೋಡು ತಿಮ್ಮಪ್ಪ. ಸಾಗರದಲ್ಲಿ ಕಾಗೋಡು ತಿಮ್ಮಪ್ಪನವರ ವಿರೋಧಿಗಳೂ ಬಹಳಷ್ಟು ವಿಷಯಗಳಲ್ಲಿ ಅವರನ್ನು ಒಪ್ಪಿಕೊಳ್ತಾರೆ. ಕಾಗೋಡು ತಿಮ್ಮಪ್ಪ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ, ತಪ್ಪನ್ನು ಗ್ರಹಿಸುತ್ತಾರೆ, ಒಳ್ಳೆಯ ಕೆಲಸ ಮಾಡುವ ವಿರೋಧಿಗಳನ್ನೂ ಮೆಚ್ಚಿಕೊಳ್ಳುತ್ತಾರೆ. ತಪ್ಪು ಎನಿಸಿದಾಗೆಲ್ಲಾ ತಮ್ಮದೇ ಪಕ್ಷದ ಮುಖ್ಯಮಂತ್ರಿಯ ವಿರುದ್ಧ ಕಾಗೋಡು ತಿಮ್ಮಪ್ಪ ಕಿಡಿಕಾರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಆರ್ಎಸ್ಎಸ್ ಕ್ರಿಯಾಶಿಲತೆಯ ತಮ್ಮ ಸೋಲಿಗೆ ಕಾರಣ ಎಂದು ಕಾಗೋಡು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಹಿಂದೊಮ್ಮೆ ನಗರಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಉತ್ತಮ ಕೆಲಸ ಮಾಡಿದ್ದ ಅಂದಿನ ನಗರಸಭಾಧ್ಯಕ್ಷ ಟಿ.ಡಿ ಮೇಘರಾಜ್ರನ್ನು ಅಭಿನಂದಿಸಿದ್ದರು ಕಾಗೋಡು. ಇಂತಹ ಹತ್ತಾರು ಉದಾಹರಣೆಗಳಿವೆ.
ಕೋಮುವಾದಿ ರಾಜಕಾರಣವನ್ನು ಸದಾ ವಿರೋಧಿಸುವ ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ನಲ್ಲಿರುವ ಸಮಾಜವಾದಿ ನಾಯಕ.. ಹೀಗಂತ ಬಂಗಾರಪ್ಪ ಹಿಂದೆ ವ್ಯಂಗ್ಯ ಮಾಡುತ್ತಿದ್ದರಾದ್ರೂ ಅದು ಸತ್ಯ. ಅವರೊಬ್ಬ ಹಿಂದುಳಿದ ವರ್ಗಗಳ, ಆದಿವಾಸಿಗಳ, ಗಿರಿಜನರ ಕಲ್ಯಾಣಕ್ಕಾಗಿ ತುಡಿಯುವ ನಾಯಕ ಅನ್ನುವುದು ನಿರ್ವಿವಾಧಿತ. ಹಿಂದೆ ಸಾಗರದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುವಾಗ ಬಡ ರೈತರ ಪರವಾದ ಹತ್ತಾರು ಕೇಸ್ಗಳನ್ನು ಹಣ ಪಡೆಯದೇ ನಡೆಸಿದ್ದವರು ಕಾಗೋಡು. ಹಳ್ಳಿಹಳ್ಳಿಗಳಿಗೂ ಸೈಕಲ್ನಲ್ಲಿ ಸಂಚರಿಸಿ ಸಮಾಜವಾದಿ ಹೋರಾಟದ ಸಂಘಟನೆ ಕಟ್ಟಿದವರು ಕಾಗೋಡು.
ಗೋಪಾಲಗೌಡ ಕ್ರೀಡಾಂಗಣ, ತಾಲೂಕಿನ ಹಳ್ಳಿಗಳಿಗೆ ಸಮರ್ಪಕ ಕುಡಿಯುವ ನೀರಿನ ಯೋಜನೆ, ಸುಸಜ್ಜಿತ ಉಪವಿಭಾಗೀಯ ಆಸ್ಪತ್ರೆ, ಸಾಗರದ ಮಹಿಳಾ ಪದವಿ ಕಾಲೇಜು, ಹಿಂದುಳಿದ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯ, ಆರ್ಯ ಈಡಿಗ ವಿದ್ಯಾರ್ಥಿ ನಿಲಯ ಮುಂತಾದ ಹತ್ತಾರು ನಿದರ್ಶನಗಳು ಕಾಗೋಡು ತಿಮ್ಮಪ್ಪನವರ ಶ್ರಮಕ್ಕೆ ಹಿಡಿದ ಕೈಗನ್ನಡಿ. ಸಾಗರದ ಜನತಾ ವಿದ್ಯಾವರ್ಧಕ ಸಂಸ್ಥೆ, ರಾಷ್ತ್ರೀಯ ವಿದ್ಯಾವರ್ಧಕ ಸಂಸ್ಥೆಗಳ ಉಪಾದ್ಯಕ್ಷರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕಾಗೋಡು ತಿಮ್ಮಪ್ಪ, ಯುವಕರಿಗೆ ತಾಂತ್ರಿಕ ಶಿಕ್ಷಣ ದೊರಕಬೇಕೆಂದು ನಿರ್ಮಿಸಿದ ಸಂಸ್ಥೆಯೇ ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜು.
ಕಾಗೋಡು ತಿಮ್ಮಪ್ಪ ಅಧಿಕಾರವಿಲ್ಲದಿದ್ದಾಗ ಜನರ ಕೈಗೆ ಸಿಗುತ್ತಾರೆ, ಜನರ ಕಷ್ಟಕ್ಕೆ ಆಗುತ್ತಾರೆ. ಬಡವರ ಪರವಾಗಿ ಹೋರಾಟ ಮಾಡುತ್ತಾರೆ. ಆದ್ರೆ ಕೈಗೆ ಅಧಿಕಾರ ಬಂದ ನಂತರ ಕಾಗೋಡು ವರ್ತನೆಯೇ ಬದಲಾಗುತ್ತದೆ, ವಿನಯದ ಬದಲು ಅಹಂಕಾರ ತುಂಬುತ್ತದೆ. ಹೀಗಂತ ಕಾಗೋಡು ತಿಮ್ಮಪ್ಪನವರ ಮೇಲೆ ಆರೋಪವೂ ಇದೆ. ಇತ್ತೀಚೆಗಷ್ಟೆ ಹಿರಿಯ ಸಾಹಿತಿ ಡಾ, ನಾಡಿಸೋಜಾ ನೇತೃತ್ವದಲ್ಲಿ ಪರಿಸರ ಹೋರಾಟಗಾರರ ಯೋಜನೆಯೊಂದರಿಂದ ಪರಿಸರ ನಾಶವಾಗುತ್ತದೆ. ಹಾಗಾಗಿ ಆ ಯೋಜನೆ ಕೈಬಿಡಿ ಎಂದು ಮನವಿ ಕೊಡಲು ತೆರಳಿದ್ದಾಗ ಕನಿಷ್ಟ ಕೂರಿಸಿ ಮಾತನಾಡು ಸೌಜನ್ಯವೂ ತೋರದೆ ಅವಮಾನ ಮಾಡಿದ್ದರು ಕಾಗೋಡು. ಇಂತಹ ಹತ್ತಾರು ಸಂದರ್ಭಗಳನ್ನು ನೆನಪು ಮಾಡಿಕೊಳ್ಳುತ್ತಾರೆ ಅವರನ್ನು ಬಲ್ಲವರು. ಇದು ಕಾಗೋಡು ತಿಮ್ಮಪ್ಪನವರ ಸುದೀರ್ಘ ರಾಜಕೀಯ ಬದುಕಿನ ಕಳಂಕವೆಂದರೆ ತಪ್ಪಲ್ಲ.
ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ, ಸೊರಬ ಹಾಗೂ ಹೊಸನಗರ ಕ್ಷೇತ್ರದಲ್ಲಿ ಅಂದಿಗೂ, ಇಂದಿಗೂ ಹಾಗೂ ಮುಂದೆಯೂ ನಿರ್ಣಾಯಕವಾಗಿರುವ ಸಮುದಾಯ ಈಡಿಗರೇ ನಿಜ. ಹಾಗಂತ ಕಾಗೋಡು ತಿಮ್ಮಪ್ಪ ತಮ್ಮ ಅಳಿಯ ತಮ್ಮ ಜಾತಿಯವ ಎಂದು ಬೇಳೂರು ಗೋಪಾಲಕೃಷ್ಣರಿಗೆ ಮಣೆ ಹಾಕುವ ಅಗತ್ಯವಿಲ್ಲ. ಅವರಿಗಿಂತ ಅರ್ಹ ನಾಯಕ ತೀ. ನಾ ಶ್ರೀನಿವಾಸ್ ಅಥವಾ ಬಿ. ಆರ್ ಜಯಂತ ಎನ್ನುವುದು ಖುದ್ದು ಕಾಗೋಡು ತಿಮ್ಮಪ್ಪನವರಿಗೂ ಗೊತ್ತು. ಈಗಲೂ ಅವರು ಇವರಿಬ್ಬರಲ್ಲಿ ಯಾರನ್ನಾದರೂ ತಮ್ಮ ಉತ್ತಾರಾಧಿಕಾರಿ ಎಂದು ಘೋಷಿಸಿ ಮುಂದಿನ ಚುನಾವಣೆಗೆ ತಯಾರಾದರೇ ಸಾಗರದ ರಾಜಕಾರಣ ಖಂಡಿತಾ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ಇಷ್ಟೆಲ್ಲಾ ಹೇಳಿದ್ದು ಯಾಕಂದರೇ ನಾನು ಪತ್ರಿಕೋದ್ಯಮದ ಅಂಬೆಗಾಲಿಟ್ಟಾಗಿಲಿನಿಂದಲೂ ಬೇಳೂರು ಗೋಪಾಲಕೃಷ್ಣರ ರಾಜಕಾರಣ ನೋಡಿಕೊಂಡು ಬಂದಿದ್ದೇನೆ. ಸಾಗರಕ್ಕೆ ಬೇಳೂರು ಖಂಡಿತಾ ಉತ್ತಮ ಆಯ್ಕೆಯಲ್ಲ.
–ವಿಭಾ (ವಿಶ್ವಾಸ್ ಭಾರದ್ವಾಜ್)