ಶಾಲಾರಂಭದ ದಿನವೇ ಉತ್ತಮ ಹಾಜರಿ ಕಂಡು ಸಂತಸವಾಗಿದೆ: ಸಚಿವ ವಿ.ಸೋಮಣ್ಣ
ಬೆಂಗಳೂರು : ಇಂದು ರಾಜ್ಯಾದ್ಯಂತ ಶಾಲಾ- ಕಾಲೇಜುಗಳು ಆರಂಭವಾಗಿವೆ. ಈ ಸಂದರ್ಭದಲ್ಲಿ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಶ್ರೀ ವಿ.ಸೋಮಣ್ಣ ಅವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಿಬಿಎಂಪಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಶಾಲೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸುಮಾರು ಒಂದೂ ಮುಕ್ಕಾಲು ವರ್ಷಗಳ ಬಳಿಕ ಶಾಲೆಗಳು ಆರಂಭವಾಗಿವೆ. ಶಾಲೆ ಆರಂಭದ ದಿನವೇ ಉತ್ತಮ ಹಾಜರಿ ಇರುವುದನ್ನು ಕಂಡು ಖುಷಿಯಾಗಿದೆ. ಈ ಮೂಲಕ ಕೋವಿಡ್ ಸಂಕಷ್ಟದ ಸಮಯದಲ್ಲಿ ಮಕ್ಕಳು ಶಾಲೆಗೆ ಹಾಜರಾಗುವ ಬಗ್ಗೆ ಇದ್ದ ದುಗುಡ ದೂರವಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಶಾಲೆ- ಕಾಲೇಜು ಆರಂಭದ ಬಗ್ಗೆ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹವಾಗಿದೆ. ಇಷ್ಟು ದಿನ ಆನ್ ಲೈನ್ ಮೂಲಕ ತರಗತಿಗಳು ನಡೆದಿದ್ದವು. ಇಂದಿನಿಂದ ಶಾಲೆಗಳು ಆರಂಭವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮುಖತಃ ಪಾಠಗಳ ಬಗ್ಗೆ ಚರ್ಚೆ ಮಾಡಬಹುದು. ಭೌತಿಕ ತರಗತಿಗಳಿಗೆ ಶಾಲೆಗಳು ಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸಜ್ಜಾಗಿವೆ. ಶಿಕ್ಷಕರು ಖುದ್ದು ಮುತುವರ್ಜಿ ವಹಿಸಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ಯಾವುದೇ ಆತಂಕವಿಲ್ಲದೇ ಪೋಷಕರು ಧೈರ್ಯವಾಗಿ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಸಚಿವರು ಹೇಳಿದರು.
ಇನ್ನು ಸಚಿವರು ಶಾಲೆಗಳಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಆತ್ಮೀಯ ವಾಗಿ ಮಾತನಾಡಿ ಮನೋಸ್ಥೈರ್ಯ ಹೆಚ್ಚಿಸಿದರು. ಅಲ್ಲದೇ ಶಾಲೆಗೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳು ಬಂದರೂ ಶೀಘ್ರವೇ ನನ್ನ ಗಮನಕ್ಕೆ ತನ್ನಿ. ಕೂಡಲೇ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಭೌತಿಕ ತರಗತಿಗಳನ್ನು ನಡೆಸಿ ಎಂದು ಸಚಿವರು ಶಾಲಾ ಸಿಬ್ಬಂದಿಗೆ ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಚಿವರೊಂದಿಗೆ ಉಪಸ್ಥಿತರಿದ್ದರು.









