ಹುಬ್ಬಳ್ಳಿ: ಶಿಗ್ಗಾಂವಿ (Shiggaon) ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರನಿಗೆ ಸೋಲಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರಿಗೆ ಧನ್ಯವಾದ ಅರ್ಪಿಸಿದ ಬೊಮ್ಮಾಯಿ, ಜನರ ತೀರ್ಪಿಗೆ ತಲೆ ಬಾಗುತ್ತೇನೆ ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಜನರ ಸ್ಪಂದನೆ ಗಮನಿಸಿದರೆ, ನಮ್ಮ ಪರ ಇತ್ತು ಅನಿಸಿತ್ತು. ಆದರೆ, ಕಾಂಗ್ರೆಸ್ ನವರು ನಿರೀಕ್ಷೆಗೂ ಮೀರಿ ಹಣದ ಹೊಳೆ ಹರಿಸಿ ಗೆದ್ದು ಬಂದಿದ್ದಾರೆ. ಶಿಗ್ಗಾಂವಿ, ಸವಣೂರು (Savanuru) ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಆ ಅಭಿವೃದ್ಧಿ ಪರ್ವ ಹಾಗೆ ಮುಂದುವರೆಯಲಿ ಎಂದು ಆಶಿಸುತ್ತೇನೆ. ಕ್ಷೇತ್ರದ ಜನರಿಗೆ ಒಳ್ಳೆದಾಗಲಿ ಎಂದು ಬಯಸುತ್ತೇನೆ ಎಂದಿದ್ದಾರೆ.
ನನ್ನ ಕ್ಷೇತ್ರದಲ್ಲಿ 10 ಜನ ಸಚಿವರು, 40ಕ್ಕಿಂತ ಹೆಚ್ಚು ಶಾಸಕರು ಬಂದು ಪ್ರಚಾರ ನಡೆಸಿದ್ದಾರೆ. ಸರ್ಕಾರದ ಹಣವನ್ನೆಲ್ಲ ಇವರು ತಂದು ಸುರಿದಿದ್ದಾರೆ. ನಾವು ಕೇವಲ ಅಭಿವೃದ್ಧಿಯ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದವರು. ಹೀಗಾಗಿ ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಮತ ಕೇಳಿದೇವು. ಆದರೆ, ಕಾಂಗ್ರೆಸ್ ಹಣದಿಂದ ಗೆದ್ದಿದೆ ಎಂದು ಆರೋಪಿಸಿದ್ದಾರೆ.








