ನಾನು ನಿರೀಕ್ಷಿಸಿರಲಿಲ್ಲ… ಕಟ್ಟ ಕಡೆಯ ಪಂದ್ಯದ ಕೊನೆಯ ಘಳಿಗೆಯಲ್ಲೂ ನಾಯಕನಾಗಿದ್ದೆ… ಇದು ಧೋನಿಯ ಅಚ್ಚರಿಯ ಕೊಡುಗೆ..!
ಮಯಾಂಕ್ ಅಗರ್‍ವಾಲ್ ಜೊತೆಗಿನ ಲೈವ್ ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಸಿಕ್ಕಾಪಟ್ಟೆ ಮಾತನಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೌರವ್ ಗಂಗೂಲಿ ಹಲವಾರು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಟೀಮ್ ಇಂಡಿಯಾವನ್ನು ಕಟ್ಟಿ ಬೆಳೆಸಿರುವುದರಿಂದ ಹಿಡಿದು ತನ್ನನ್ನು ನಾಯಕತ್ವದಿಂದ ಕೆಳಗಿಳಿಸಲು ಏನೆಲ್ಲಾ ಪ್ಲಾನ್ ಮಾಡಿದ್ರೂ ಎಂಬುದನ್ನು ಸಹ ಹೇಳಿಕೊಂಡಿದ್ದಾರೆ. ಇದೀಗ ತನ್ನ ವಿದಾಯದ ಪಂದ್ಯವನ್ನು ನೆನಪು ಮಾಡಿಕೊಂಡಿದ್ದಾರೆ.
ಅದು ನವೆಂಬರ್ 2008. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ. ನಾಗ್ಪುರದಲ್ಲಿ ನಡೆದಿದ್ದ ಪಂದ್ಯವದ್ದು. ಅಂದ ಹಾಗೇ ಇದು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಕ್ರಿಕೆಟ್ ಬದುಕಿನ ವಿದಾಯದ ಪಂದ್ಯವಾಗಿತ್ತು. ಹೀಗಾಗಿ ಈ ಪಂದ್ಯ ಹೆಚ್ಚಿನ ವಿಶೇಷತೆಯನ್ನು ಪಡೆದುಕೊಂಡಿತ್ತು. ಅಲ್ಲದೆ ಗಂಗೂಲಿ ಪಂದ್ಯಕ್ಕಿಂತ ಮುನ್ನವೇ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಅಂತನೂ ಹೇಳಿದ್ದರು.
ಅಂದ ಹಾಗೇ ಅದು ಪಂದ್ಯದ ಕೊನೆಯ ದಿನ. ಭೋಜನ ವಿರಾಮದ ವೇಳೆ ಆಸ್ಟ್ರೇಲಿಯಾ ತನ್ನ ಪ್ರಮುಖ ಮೂರು ವಿಕೆಟ್‍ಗಳನ್ನು ಕಳೆದುಕೊಂಡಿತ್ತು. ಆಸ್ಟ್ರೇಲಿಯಾಗೆ ಗೆಲ್ಲಲು ಇನ್ನೂ 271 ರನ್‍ಗಳು ಬೇಕಿದ್ದವು. ವಿರಾಮದ ನಂತರ ಗಂಗೂಲಿ ಸೇರಿದಂತೆ ಟೀಮ್ ಇಂಡಿಯಾ ಆಟಗಾರರು ಮೈದಾನಕ್ಕಿಳಿದಿದ್ದರು. ಆಗ ಟೀಮ್
ಇಂಡಿಯಾ ಆಟಗಾರರು ಗಂಗೂಲಿಗೆ ಗೌರವ ಸಲ್ಲಿಸಿದ್ದರು. ಆ ನಂತರ ಮೈದಾನದಲ್ಲಿ ಗಂಗೂಲಿಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಅಚ್ಚರಿಯ ಗಿಫ್ಟ್ ನೀಡಿದ್ದರು. ಅದು ಏನು ಅಂದ್ರೆ…
ಅದು ಪಂದ್ಯದ ಕೊನೆಯ ಹಂತ. ನನಗೆ ಅಚ್ಚರಿಯೊಂದು ಕಾದಿತ್ತು. ಹಾಗಂತ ಅದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಆಗ ಟೀಮ್ ಇಂಡಿಯಾದ ನಾಯಕನಾಗಿದ್ದ ಮಹೇಂದ್ರ ಸಿಂಗ್ ಅವರು ನನ್ನ ಕೈಗೆ ಮೈದಾನದಲ್ಲಿ ನಾಯಕತ್ವದ ಜವಾಬ್ದಾರಿಯನ್ನು ನೀಡಿದ್ದರು. ನನಗೆ ಇದು ಆಶ್ಚರ್ಯವನ್ನುಂಟು ಮಾಡಿತ್ತು. ಆದ್ರೆ ಇದು ಎಮ್.ಎಸ್. ಧೋನಿಯ ಸ್ಪೇಷಾಲಿಟಿ. ನಾಯಕನಾಗಿ ಅಚ್ಚರಿಯನ್ನುಂಟು ಮಾಡೋದು ಅವರ ಸ್ಟೈಲ್. ಅಷ್ಟಕ್ಕೂ ನಾವು ಆ ಪಂದ್ಯವನ್ನು ಗೆದ್ದುಕೊಂಡಿದ್ದೇವು. ಕೊನೆಯ ಕ್ಷಣದಲ್ಲಿ ನನ್ನ ತಲೆಯಲ್ಲಿ ವಿದಾಯದ ಬಗ್ಗೆನೇ ಯೋಚನೆಯಾಗಿತ್ತು. ಕೊನೆಯ ಮೂರು ನಾಲ್ಕು ಓವರ್‍ಗಳಲ್ಲಿ ಏನು ಮಾಡಿದ್ದೇನೆ ಎಂಬುದೇ ನನಗೆ ಗೊತ್ತಿಲ್ಲ ಅಂತ ಗಂಗೂಲಿ ಹೇಳಿದ್ದಾರೆ.
ಆ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು 172 ರನ್‍ಗಳಿಂದ ಪರಾಭವಗೊಳಿಸಿತ್ತು. ಅಲ್ಲದೆ ಟೀಮ್ ಇಂಡಿಯಾದ ಮಾಜಿ ನಾಯಕನಿಗೆ ಧೋನಿ ಹುಡುಗರು ಅರ್ಥಪೂರ್ಣ ವಿದಾಯವನ್ನೇ ಹೇಳಿದ್ದರು. ಇನ್ನು ಮಯಾಂಕ್ ಅಗರ್‍ವಾಲ್ ಅವರು ಕೆಲವೊಂದು ಪಂದ್ಯಗಳ ಚಿತ್ರಗಳನ್ನು ಗಂಗೂಲಿಗೆ ತೋರಿಸುತ್ತಿದ್ದರು. ಆ ಚಿತ್ರಗಳನ್ನೆಲ್ಲಾ ಗಂಗೂಲಿ ನೆನಪಿಸಿಕೊಂಡು ಆ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತಿದ್ದರು.








