ಬೆಂಗಳೂರು: ಕೊರೊನಾ ಗಂಭೀರತೆ ನನಗೆ ತಿಳಿದಿದೆ. ನಾನು ಮನೆಯಲ್ಲಿಯೇ ಇದ್ದು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ. ಆದರೆ ನಡೆದ ಘಟನೆಯನ್ನು ತಿಳಿದುಕೊಳ್ಳದೆ, ಅಪಘಾತದ ಸುದ್ದಿ ಎಲ್ಲೆಡೆ ಸುಳ್ಳು ಸುಳ್ಳಾಗಿ ವೈರಲ್ ಆಗಿರುವುದು ದುರದೃಷ್ಟಕರ ಸಂಗತಿ ಎಂದು ನಟಿ ಶರ್ಮಿಳಾ ಮಾಂಡ್ರೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಕಾರು ಅಪಘಾತದ ಕುರಿತು ಮಾತನಾಡಿರುವ ಶರ್ಮಿಳಾ, ನಾನು ಯಾವುದೇ ಪಾರ್ಟಿ ಮಾಡಲು ಹೊರಗೆ ಹೋಗಿರಲಿಲ್ಲ. ಔಷಧಿಗಾಗಿ ಮನೆಯಿಂದ ಹೊರ ಬಂದಿದ್ದೆ ಅಷ್ಟೆ’ ಎಂದು ಜಾಲಿ ರೈಡ್ ವದಂತಿಯನ್ನು ತಳ್ಳಿ ಹಾಕಿದ್ದಾರೆ.
ಇದೇ ವೇಳೆ ಲಾಕ್ ಡೌನ್ ನಡುವೆ ರಾತ್ರೋರಾತ್ರಿ ಸ್ನೇಹಿತರ ಜತೆ ಜಾಲಿ ರೈಡ್ ಹೋಗಿ ಅಪಘಾತ ಮಾಡಿದ್ದಾರೆ ಎಂದು ದಾಖಲಾಗಿರುವ ಪ್ರಕರಣದ ಕುರಿತಂತೆ ಸ್ಪಷ್ಟನೆ ನೀಡಿರುವ ಶರ್ಮಿಳಾ, ನನಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆಗ ನನ್ನ ಸ್ನೇಹಿತರಾದ ಲೋಕೇಶ್ ಮತ್ತು ಡಾನ್ ಥಾಮಸ್ ಅವರ ಸಹಾಯ ಕೇಳಿದೆ. ಅವರ ಬಳಿ ಲಾಕ್ ಡೌನ್ ವೇಳೆ ಓಡಾಡುವ ಪಾಸ್ ಇತ್ತು. ಹೀಗಾಗಿ ನನ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿಕೊಂಡೆ. ಈ ವೇಳೆ ಅಪಘಾತವಾಗಿದೆ. ಡಾನ್ ಕಾರು ಓಡಿಸುತ್ತಿದ್ದ. ನಾನು ಹಿಂಬದಿ ಸೀಟಿನಲ್ಲಿ ಕುಳಿತಿದ್ದೆ. ಈ ಅಪಘಾತದಲ್ಲಿ ನನ್ನ ಕುತ್ತಿಗೆಗೆ ಪೆಟ್ಟಾಗಿದೆ’ ಎಂದು ಹೇಳಿದ್ದಾರೆ.