ಬೆಳಗಾವಿ: ವಯನಾಡಿನಲ್ಲಿ ನಡೆದ ದುರಂತದ ಬಗ್ಗೆ ನಾನು 20 ದಿನಗಳ ಹಿಂದೆಯೇ ಹೇಳಿದ್ದೆ ಎಂದು ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Shivayogi Rajendra Swamiji) ಹೇಳಿದ್ದಾರೆ.
ಬೆಳಗಾವಿಯ (Belagavi) ರಾಮತೀರ್ಥ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಪ್ಪತ್ತು ದಿನಗಳ ಹಿಂದೆಯೇ ಈ ರೀತಿ ಆಗುತ್ತೆ ಎಂದು ನಾನು ಹೇಳಿದ್ದೆ. ಮಳೆ ಆಗುತ್ತೆ, ಗುಡ್ಡ ಉರುಳುತ್ತೆ, ಜನರು ಸಾಯುತ್ತಾರೆ, ರೋಗ-ರುಜಿನಗಳು ಹೆಚ್ಚಾಗುತ್ತವೆ ಎಂದು ಹೇಳಿದ್ದೆ. ಇದನ್ನು ದೇಶಕ್ಕಷ್ಟೇ ಹೇಳಿಲ್ಲ. ಜಾಗತಿಕ ಮಕ್ಕಟದಲ್ಲಿ ಆಗುತ್ತದೆ ಎಂದು ಹೇಳಿದ್ದೆ. ಕೆಲವು ರಾಜ್ಯಗಳೇ ಮುಳುಗುತ್ತವೆ ಎಂದು ಹೇಳಿದ್ದೇನೆ ಎಂದು ಹೇಳಿದ್ದಾರೆ.
ಅಮಾವಾಸ್ಯೆವರೆಗೂ ಮಳೆ ಸುರಿಯುತ್ತದೆ. ನಂತರ ಬೇರೆ ಭಾಗದತ್ತ ಹೋಗಲಿದೆ. ಇದು ಕ್ರೋಧಿನಾಮ ಸಂವತ್ಸರ, ಕ್ರೋಧಿ ಅಂದ್ರೆ ಸಿಟ್ಟು ಇದರಲ್ಲಿ ಒಳ್ಳೆಯದ್ದೂ ಇದೆ, ಕೆಟ್ಟದ್ದೂ ಇದೆ. ಈ ಪೈಕಿ ಕೆಟ್ಟದ್ದೇ ಜಾಸ್ತಿ ಇರುತ್ತದೆ. ಈ ಪ್ರಾಕೃತಿಕ ದೋಷ ಮುಂದುವರಿಯುತ್ತದೆ. ಅನಿಷ್ಠ ಜಾಸ್ತಿ ಇದೆ, ಕತ್ತಲು ಬೆಳಕು – ಎರಡು ಇರುತ್ತೆ ಅದರಲ್ಲಿ ಕತ್ತಲು ಜಾಸ್ತಿ ಇರುತ್ತೆ ಮುಂದೆ ಎಂದು ಹೇಳಿದ್ದಾರೆ.
ಭೂಮಿ ಕಂಪಿಸುತ್ತೆ, ಜನ ಸಾಯುತ್ತಾರೆ. ಕೆಲ ರಾಜ್ಯಗಳು ಮುಳುಗಡೆಯಾಗುತ್ತವೆ. ರಾಜ್ಯದಲ್ಲಿ ಜಲಕಂಟಕ ಹಾಗೂ ಪ್ರಕೃತಿ ವಿಕೋಪ ಮುಂದುವರಿಯಲಿದೆ. ಹಾನಿ ಜಾಸ್ತಿಯಾಗಲಿದೆ. ಬರುವ ಅಮಾವಾಸ್ಯೆವರೆಗೆ ಕಾಲ ಚೆನ್ನಾಗಿಲ್ಲ. ಕೇವಲ ಭಾರತಕ್ಕೆ ಅಷ್ಟೇ ಅಲ್ಲ ಇಡೀ ವಿಶ್ವಕ್ಕೆ ಜಲ ಕಂಟಕವಿದೆ ಎಂದು ಹೇಳಿದ್ದಾರೆ.








