ಇಬ್ಬರು ಗೆಳತಿಯರನ್ನ ಏಕಕಾಲಕ್ಕೆ ಮದುವೆಯಾದ ಭೂಪ….
ಜಾರ್ಖಂಡ್ನ ಲೋಹರ್ದಗಾ ಎಂಬ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಗೆಳತಿಯರನ್ನು ಏಕಕಾಲದಲ್ಲಿ ಮದುವೆಯಾಗಿದ್ದಾನೆ. ಈ ಮದುವೆ ಮೂವರಿಗೂ ಒಪ್ಪಿತವಾಗಿದೆ.
ಕುಸುಮ್ ಲಾಕ್ರಾ ಮತ್ತು ಸ್ವಾತಿ ಕುಮಾರಿ ಎಂಬ ಇಬ್ಬರೂ ಮಹಿಳೆಯರು ವರ ಸಂದೀಪ್ ಓರಾನ್ ಎಂಬಾತನನ್ನ ಪ್ರೀತಿಸುತ್ತಿದ್ದರು. ಲೋಹರ್ದಗಾ ದ ಭಾಂದ್ರಾ ಬ್ಲಾಕ್ನ ಬಂಡಾ ಗ್ರಾಮದಲ್ಲಿ ವರ ಇಬ್ಬರನ್ನೂ ಒಟ್ಟಿಗೆ ಮದುವೆಯಾಗಿದ್ದಾನೆ.
ಸಂದೀಪ್ ಮತ್ತು ಕುಸುಮ್ ಮೂರು ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಅವರಿಬ್ಬರಿಗೂ ಒಂದು ಮಗು ಕೂಡ ಇದೆ. ಒಂದು ವರ್ಷದ ಹಿಂದೆ ಸಂದೀಪ್ ಪಶ್ಚಿಮ ಬಂಗಾಳದ ಇಟ್ಟಿಗೆ ಗೂಡು ಕೆಲಸಕ್ಕೆ ಹೋದಾಗ ಅವರ ಪ್ರೇಮಕಥೆ ತಿರುವು ಪಡೆದಿದೆ.
ಆಗ ಅಲ್ಲಿ ಇಟ್ಟಿಗೆ ಗೂಡು ಕೆಲಸಕ್ಕೆ ಬಂದಿದ್ದ ಸ್ವಾತಿಕುಮಾರಿಯನ್ನು ಸಂದೀಪ್ ಭೇಟಿಯಾಗಿ ಪರಿಚಯ ಮಾಡಿಕೊಂಡಿದ್ದಾರೆ. ಮನೆಗೆ ಹಿಂದಿರುಗಿದ ನಂತರವೂ ಇಬ್ಬರೂ ಭೇಟಿಯಾಗುವುದನ್ನ ಮುಂದುವರೆಸಿದ್ದಾರೆ. ಕೊನೆಗೆ ಇವರಿಬ್ಬರ ಸಂಬಂಧ ತಿಳಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಇದನ್ನ ವಿರೋಧಿಸಿದ್ದಾರೆ.
ಸರಣಿ ಜಗಳದ ನಂತರ, ಗ್ರಾಮಸ್ಥರು ಪಂಚಾಯತಿಗೆ ಕರೆದು ಸಂದೀಪ್ ಇಬ್ಬರೂ ಮಹಿಳೆಯರನ್ನ ಮದುವೆಯಾಗಬೇಕೆಂದು ಪಂಚಾಯಿತಿ ಮಾಡಿದ್ದಾರೆ. ಮಹಿಳೆಯರಾಗಲಿ ಅಥವಾ ಅವರ ಕುಟುಂಬದವರಾಗಲಿ ವಿರೋಧಿಸದ ಕಾರಣ ಸಂದೀಪ್ ಇಬ್ಬರನ್ನೂ ಮದುವೆಯಾಗಿದ್ದಾನೆ.