ಹೌದು, ಇಂತಹದ್ದೊಂದು ಸಾಧನೆ ಕಳೆದ ಎರಡು ಮೂರು ದಶಕಗಳಲ್ಲಿ ಮೂಡಿ ಬಂದಿಲ್ಲ. ವಿಶ್ವ ಕ್ರಿಕೆಟ್ ನಲ್ಲಿ ಅದೆಷ್ಟೋ ದಾಖಲೆಗಳು ಆಗಿವೆ. ಅದೆಷ್ಟೋ ದಾಖಲೆಗಳು ಮರೆಯಾಗಿ ಹೊಗಿವೆ. ಅದೆಷ್ಟೋ ದಾಖಲೆ ಮಾಡಿದ ಕ್ರಿಕೆಟಿಗರು ತೆರೆಮರೆಗೆ ಸರಿದಿದ್ದಾರೆ. ಅದೆಷ್ಟೋ ಯುವ ಕ್ರಿಕೆಟಿಗರು ಅಪ್ರತಿಮ ಸಾಧನೆ ಮಾಡಿದ್ದಾರೆ. ಆದ್ರೆ ಆ ಒಂದು ಸಾಧನೆ, ಆ ಒಂದು ದಾಖಲೆಯನ್ನು ಇಂದಿಗೂ ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಅಷ್ಟಕ್ಕೂ ಆ ಒಂದು ಸಾಧನೆ, ದಾಖಲೆಯಾಗಿದ್ದು ವಿಶ್ವಕ್ರಿಕೆಟ್ ನಲ್ಲಿ ಕೇವಲ ಎರಡನೇ ಬಾರಿ ಮಾತ್ರ.
ಅಷ್ಟಕ್ಕೂ ಆ ದಾಖಲೆ ಯಾವುದು ಗೊತ್ತಾ? ಒಂದೇ ಇನ್ಸಿಂಗ್ಸ್ ನಲ್ಲಿ ಎದುರಾಳಿ ತಂಡದ ಹತ್ತೂ ವಿಕೆಟ್ ಪಡೆದ ಬೌಲರ್ ಯಾರ್ಯಾರು.. ? ಕ್ರಿಕೆಟ್ ಚರಿತ್ರೆಯಲ್ಲೇ ದಾಖಲಾಗಿದ್ದು ಆ ಎರಡನೇ ಹೆಸರು. ಒಂದು ಇಂಗ್ಲೆಂಡ್‍ನ ಜಿಮ್ ಲೇಕರ್, ಮತ್ತೊಂದು ಭಾರತದ ಅನಿಲ್ ಕುಂಬ್ಳೆ. ಜೀಮ್ ಲೇಕರ್ 1956ರಲ್ಲಿ ಆಸ್ಟ್ರೇಲಿಯಾ ವಿರುದ್ಧ 54ಕ್ಕೆ 10 ವಿಕೆಟ್ ಉರುಳಿಸಿದ್ರೆ, ಅನಿಲ್ ಕುಂಬ್ಳೆ 1999ರಲ್ಲಿ ಪಾಕಿಸ್ತಾನ ವಿರುದ್ಧ 74ಕ್ಕೆ 10 ವಿಕೆಟ್ ಕಬಳಿಸಿರುವುದು. ಒಂದು ದಾಖಲೆ 33 ವರ್ಷಗಳ ನಂತ್ರ ಸಮಗೊಳಿಸಿದ್ರೆ, ಇನ್ನೊಂದು ದಾಖಲೆ 21 ವರ್ಷಗಳಾದ್ರೂ ಯಾರಿಂದಲೂ ಈ ಸಾಲಿಗೆ ಸೇರ್ಪಡೆಗೊಳ್ಳಲು ಸಾಧ್ಯವಾಗಿಲ್ಲ. ಅಂತಹ ದಾಖಲೆಗಳಿಗೆ ಸಾಕ್ಷಿಯಾಗಿರುವ ಅಂಗಣಗಳು ಅಂದ್ರೆ ಒಂದು ಓಲ್ಡ್ ಟ್ರಾಫೋರ್ಡ್ ಮತ್ತು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನ.
ಇದೀಗ ಲಾಕ್ ಡೌನ್ ಟೈಮ್ ನಲ್ಲಿ ಅಂದಿನ ಪಾಕ್ ನಾಯಕ ಅನಿಲ್ ಕುಂಬ್ಳೆಯ ಆ ಮಹೋನ್ನತ ಸಾಧನೆಯನ್ನು ನೆನಪಿಸಿಕೊಂಡಿದ್ದಾರೆ. ವಾಸೀಮ್ ಅಕ್ರಮ್‍ಗೆ ಈ ಪಂದ್ಯ ಮರೆಯಲಾಗದ ಪಂದ್ಯವಾಗಿದೆ. ಯಾಕಂದ್ರೆ ಒಂದು ಪಾಕ್ ತಂಡದ ನಾಯಕ. ಮತ್ತೊಂದು ತನ್ನ ತಂಡದ ಬ್ಯಾಟ್ಸ್ ಮೆನ್‍ಗಳು ಕುಂಬ್ಳೆಗೆ ಯಾವ ರೀತಿ ವಿಕೆಟ್ ಒಪ್ಪಿಸಿದ್ರು ಎಂಬುದನ್ನು ಕಣ್ಣಾರೆ ನೋಡಿದವರು. ಅಷ್ಟು ಮಾತ್ರವಲ್ಲ. ಹತ್ತನೇಯವರಾಗಿ ವಿಕೆಟ್ ಒಪ್ಪಿಸಿದ್ದು ಕೂಡ ವಾಸೀಮ್ ಅಕ್ರಂ ಅವ್ರೇ. ಕುಂಬ್ಳೆಗೆ ವಿಕೆಟ್ ಒಪ್ಪಿಸಲೇಬಾರದು ಅಂತ ಜಿದ್ದಿಗೆ ಬಿದ್ದಿದ್ದ ವಾಸೀಮ್ ಅಕ್ರಮ್ ಅವರನ್ನು ಯಾವ ರೀತಿ ಔಟ್ ಮಾಡಿದ್ರು ಎಂಬುದನ್ನು ಕೂಡ ಅಕ್ರಂ ಮೆಲುಕು ಹಾಕಿಕೊಂಡಿದ್ದಾರೆ.
ಹಾಗೇ ನೋಡಿದ್ರೆ ಆ ಎರಡನೇ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನಿಂಗ್ಸ್ ನಲ್ಲಿ ಪಾಕಿಸ್ತಾನ ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲೇ ಇತ್ತು. ಅದು ಪಂದ್ಯದ ನಾಲ್ಕನೇ ದಿನ. ಪಾಕ್‍ಗೆ ಗೆಲ್ಲಲು 420 ರನ್‍ಗಳ ಸವಾಲಿತ್ತು. ಆರಂಭಿಕರಾದ ಶಾಹೀದ್ ಆಫ್ರಿದಿ ಮತ್ತು ಸಯ್ಯದ್ ಅನ್ವರ್ ಶತಕದ (101) ಜೊತೆಯಾಟವನ್ನು ಆಡಿದ್ದರು. ಅಲ್ಲದೆ ಆಫ್ರಿದಿ ಮತ್ತು ಅನ್ವರ್ ಭಾರತದ ವಿರುದ್ಧ ಬಿರುಸಿನ ಆಟವನ್ನೇ ಆಡಿದ್ದರು. ಅನ್ವರ್ ಹಾಗೂ ಆಫ್ರಿದಿ 41 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಆಗಲೇ ಕುಂಬ್ಳೆಯವರ ಮ್ಯಾಜಿಕ್ ಎಸೆತಗಳು ಪಾಕ್ ಅಬ್ಬರಕ್ಕೆ ಕಡಿವಾಣ ಹಾಕಲು ಶುರು ಮಾಡಿದ್ದವು. ಆಗ ಕುಂಬ್ಳೆ ಮನಸ್ಸಿನಲ್ಲಿ ನಾನು ಹತ್ತೂ ವಿಕೆಟ್‍ಗಳನ್ನು ಪಡೆಯುತ್ತೇನೆ ಅನ್ನೋ ಸಣ್ಣ ಸುಳಿವು, ಆಸೆಯೂ ಇರಲಿಲ್ಲ.
ಆದ್ರೆ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಕುಂಬ್ಳೆ ಜಾದು ಮಾಡಲು ಶುರು ಮಾಡಿದ್ದರು. ಆಫ್ರಿದಿಯವರನ್ನು ಮೊದಲನೇ ಬಲಿ ಪಡೆದ ಕುಂಬ್ಳೆ, ಇಜಾಜ್ ಅಹಮ್ಮದ್ ಅವರನ್ನು ಮೊದಲ ಎಸೆತದಲ್ಲೇ ಶೂನ್ಯ ಸುತ್ತುವಂತೆ ಮಾಡಿದ್ದರು. ಆ ನಂತರ ಇಂಜಮಮ್ ಉಲ್ ಹಕ್ (6), ಮಹಮ್ಮದ್ ಯೂಸುಫ್ (0), ಮೋಯಿನ್ ಖಾನ್ (3), ಆರಂಭಿಕ ಸಯ್ಯದ್ ಅನ್ವರ್ (69), ಸಲೀಮ್ ಮಲ್ಲಿಕ್ (15) ಮಸ್ತಾಕ್ ಅಹಮ್ಮದ್ (1), ಸಕ್ಲೇನ್ ಮುಷ್ತಾಕ್ (0) ಹೀಗೆ ದೂರವಾಣಿ ನಂಬರ್‍ನಂತೆ ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದಿದ್ದರು.
ಆದ್ರೆ ನಾಯಕ ವಾಸೀಮ್ ಅಕ್ರಮ್ ಮಾತ್ರ ನೆಲಕಚ್ಚಿ ನಿಂತು ಆಡುತ್ತಿದ್ದರು. ಅಕ್ರಮ್ ಅಂತಿಮ ವಿಕೆಟ್‍ಗೆ ವಕಾರ್ ಯೂನಸ್ ಜೊತೆ ಬ್ಯಾಟಿಂಗ್ ಮಾಡುತ್ತಿದ್ದರು. ವಾಸೀಮ್ ಅಕ್ರಮ್ ಗೆ ಸೋಲು ಖಚಿತ ಗೊತ್ತಿತ್ತು. ಆದ್ರೆ ಅನಿಲ್ ಕುಂಬ್ಳೆಗೆ ವಿಕೆಟ್ ಒಪ್ಪಿಸಬಾರದು ಅಂತ ಜಿದ್ದಿನಿಂದಲೇ ಆಡುತ್ತಿದ್ದರು. ಆಗ ಭಾರತ ತಂಡದ ಪಾಳೆಯದಲ್ಲಿ ಕುಂಬ್ಳೆಗೆ ಹತ್ತೂ ವಿಕೆಟ್ ಸಿಗಬೇಕು ಅನ್ನೋ ಆಶಾವಾದವನ್ನು ಹೊಂದಿದ್ದರು. ಹತ್ತೂ ವಿಕೆಟ್ ಪಡೆದ್ರೆ ಅದೊಂದು ಐತಿಹಾಸಿಕ ಸಾಧನೆಯಾಗುತ್ತೆ ಅನ್ನೋ ಖುಷಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರಲ್ಲಿತ್ತು.
ಆದ್ರೆ ವಾಕರ್ ಗೇಮ್ ಪ್ಲಾನ್ ಬೇರೆಯದ್ದೇ ಆಗಿತ್ತು. ವಾಸೀಮ್ ಅಕ್ರಮ್ ವಿಕೆಟ್ ಒಪ್ಪಿಸುವುದಕ್ಕೆ ಮುನ್ನ ಏನು ಹೇಳಿದ್ದರು ಎಂಬುದನ್ನು ಅವರೇ ಈಗ ಹೇಳಿಕೊಂಡಿದ್ದಾರೆ. ನಾನು ವಕಾರ್ ಯೂನಸ್‍ಗೆ ಹೇಳಿದ್ದೆ. ನೀನು ನಿನ್ನ ನೈಜ ಆಟವನ್ನು ಆಡು ಅಂತ. ನಾನಂತೂ ಅನಿಲ್ ಕುಂಬ್ಳೆಗೆ ವಿಕೆಟ್ ಒಪ್ಪಿಸುವುದಿಲ್ಲ. ಶ್ರೀನಾಥ್‍ಗೆ ಟಾರ್ಗೆಟ್ ಮಾಡ್ಕೊಂಡು ಆಡು ಅಂತ ಒಬ್ಬ ನಾಯಕನಾಗಿ ನಾನು ಯೂನಸ್‍ಗೆ ಆಗ ಹೇಳಿದ್ದೆ.ನಂತರ ಕುಂಬ್ಳೆ ಓವರ್‍ನ ಮೊದಲ ಎಸೆತ. ಇನ್‍ಸೈಡ್ ಎಡ್ಜ್ ಆಗಿ ಚೆಂಡು ಲಕ್ಷ್ಮಣ್ ಕೈ ಸೇರಿತ್ತು. ಹೀಗೆ ಕುಂಬ್ಳೆ ಇನಿಂಗ್ಸ್‍ನ ಹತ್ತೂ ವಿಕೆಟ್‍ಗಳನ್ನು ಪಡೆದು ಐತಿಹಾಸಿಕ ಸಾಧನೆ ಮಾಡಿದ್ದರು. ನನ್ನ ಪ್ಲಾನ್ ವರ್ಕ್ ಔಟ್ ಆಗಲಿಲ್ಲ ಎಂದು ವಾಸೀಮ್ ಅಕ್ರಂ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.







