ಇಸ್ಲಾಮಾಬಾದ್ : ಪಾಕಿಸ್ತಾನದ ರಾಷ್ಟ್ರಪತಿಭವನದಲ್ಲೇ ನನ್ನ ಮೇಲೆ ಅತ್ಯಾಚಾರವಾಗಿತ್ತು ಎಂದು ಅಮೆರಿಕದ ಮಹಿಳೆ, ಬ್ಲಾಗರ್ ಸಿಂಥಿಯಾ ಡಾನ್ ರಿಚ್ಚಿ ಆರೋಪಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿಂಥಿಯಾ ರಿಚ್ಚಿ, ನನ್ನ ಕಥೆ ತುಂಬಾ ಭಾವುಕವಾಗಿದೆ. ಈ ಬಗ್ಗೆ ಇದುವರೆಗೂ ನನ್ನ ಕುಟುಂಬಕ್ಕೂ ತಿಳಿದಿಲ್ಲ. ನಾನು ಸಕಾರಾತ್ಮಕವಾಗಿರಲು ಪ್ರಯತ್ನಿಸಿ, ಪಾಕಿಸ್ತಾನದ ಒಳ್ಳೆಯದನ್ನೇ ಸ್ವೀಕರಿಸಿದೆ. ಆದರೆ ಕೆಟ್ಟದ್ದನ್ನು ಸಹ ಅನುಭವಿಸಿದ್ದೇನೆ. ಸದ್ಯ ಸತ್ಯವನ್ನು ಹೇಳಲು ಬಯಸುತ್ತೇನೆ. ಇದರಿಂದ ಮಹಿಳೆಯರು, ಸ್ಥಳೀಯರು ಏಕಾಂಗಿಯಾಗಿಲ್ಲ ಎಂದು ಅರ್ಥಮಾಡಿಕೊಳ್ಳಬಹುದು.
ನಾನು ಪಿಪಿಪಿ ಮೇಲೆ ದೋಷಾರೋಪಣೆ ಮಾಡುತ್ತಿಲ್ಲ. ಏಕೆಂದರೆ ನಾನು ಬೇರೆ ಬೇರೆ ಪಕ್ಷಗಳ ಪುರುಷರಿಂದ ನಿಂದಿಸಲ್ಪಟ್ಟಿದ್ದೇನೆ. ಆದರೆ ಎರಡು ಪ್ರಕರಣಗಳು ಪಿಪಿಪಿಗೆ ಸಂಬಂಧಿಸಿವೆ. ಅನೇಕರು ಸೆಕ್ಸ್ ಗಾಗಿ ಇಷ್ಟಪಟ್ಟರು ಎನ್ನುವುದನ್ನು ನಿಮಗೆ ತಿಳಿಸುತ್ತಿದ್ದೇನೆ. ಪಿಪಿಪಿ ನಾಯಕರು ನನ್ನ ವಿರುದ್ಧ ನಿಂದನೀಯ ಭಾಷೆಯನ್ನು ಬಳಸುತ್ತಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡುವ ಗೀಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆಯರಿಗೆ ಅತ್ಯಾಚಾರದ ಅದ್ಭುತ ಕಥೆಗಳನ್ನು ಹೇಳುವುದನ್ನು ಆನಂದಿಸುತ್ತಾರೆ.
https://www.facebook.com/cynthiadritchie/videos/3012638535481275/
ಅವರು ಅತ್ಯಾಚಾರ ಸಂಸ್ಕೃತಿಯನ್ನು ನಿಲ್ಲಿಸಬೇಕು. ಈ ಅಸಹ್ಯಕರ ಕೆಲಸದ ಬಗ್ಗೆ ಮಹಿಳೆಯರು ಒಂದಾಗಬೇಕು ಮತ್ತು ಮಕ್ಕಳಿಗೆ ತಿಳಿಸಬೇಕು. ಇದು ಕೇವಲ ಪಿಪಿಪಿಯ ವಿಷಯವಲ್ಲ. ಅನೇಕ ರಾಜಕೀಯ ಪಕ್ಷಗಳು ನನ್ನನ್ನು ಶೋಷಿಸಿವೆ. ಈ ಘಟನೆಗಳ ಬಗ್ಗೆ ನಾನು ಕುಟುಂಬಕ್ಕೆ ಎಂದಿಗೂ ಹೇಳಲಿಲ್ಲ. ಪಾಕಿಸ್ತಾನದ ಉತ್ತಮ ಚಿತ್ರಣವನ್ನು ರಚಿಸಲು ನಾನು ಯಾವಾಗಲೂ ಶ್ರಮಿಸುತ್ತೇನೆ ಎಂದು ಸಿಂಥಿಯಾ ತಿಳಿಸಿದ್ದಾರೆ.
ಹೀಗೆ ಸರಣಿ ಟ್ವೀಟ್ ಗಳ ಮೂಲಕ ತಮ್ಮ ನೋವನ್ನು ಹೇಳಿಕೊಂಡಿರುವ ಸಿಂಥಿಯಾ ಇದೇ ವಿಚಾರವಾಗಿ ಫೇಸ್ ಬುಕ್ ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆದರೆ ಮಾಜಿ ಪ್ರಧಾನಿ ಗಿಲಾನಿ, ಸಿಂಥಿಯಾ ಅವರ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇತ್ತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಹಮಾನ್ ಮಲಿಕ್ ಈವರಿಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.








