ಕೆಲವೇ ದಿನಗಳಲ್ಲಿ ಸಾಕ್ಷಿ ಸಮೇತ ಉತ್ತರ ನೀಡುತ್ತೇನೆ – ಡ್ರೋನ್ ಪ್ರತಾಪ್
ಮಂಡ್ಯ, ಜುಲೈ 11: ಮಂಡ್ಯದ ‘ಯುವ ವಿಜ್ಞಾನಿ’ ಡ್ರೋನ್ ಪ್ರತಾಪ್ ತನ್ನ ಮೇಲೆ ಕೇಳಿ ಬಂದಿರುವ ಅಪಾದನೆಯ ಹಿನ್ನಲೆಯಲ್ಲಿ ಸುದ್ದಿ ವಾಹಿನಿಯೊಂದರಲ್ಲಿ ಪ್ರತ್ಯಕ್ಷನಾಗಿ ಸ್ಪಷ್ಟನೆ ನೀಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಕುರಿತು ಅಪಪ್ರಚಾರ ನಡೆಯುತ್ತಿದ್ದು, ಯಾವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಹೇಳಿದ್ದಾನೆ.
ನನ್ನ ಬಳಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಸಲುವಾಗಿ ವಿದೇಶಕ್ಕೆ ಪ್ರಯಾಣಿಸಿದ ವಿಮಾನ ಪ್ರಯಾಣದ ಟಿಕೆಟ್ ಗಳಿವೆ. ನಾನು ಅಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಗೆದ್ದಿದ್ದೇನೆ ಕೂಡ. ಅದಕ್ಕೆ ಸಂಬಂಧಿಸಿದ ಎಲ್ಲಾ ಸರ್ಟಿಫಿಕೇಟ್, ಪದಕಗಳು ನನ್ನ ಬಳಿ ಇವೆ. ಶೀಘ್ರದಲ್ಲೇ ಸುದ್ದಿಗೋಷ್ಠಿಯನ್ನು ಕರೆದು ಸಂಪೂರ್ಣ ಮಾಹಿತಿ ನೀಡುತ್ತೇನೆ ಮತ್ತು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ಕಾನೂನಾತ್ಮಕ ಕ್ರಮಗಳ ಮೂಲಕ ಉತ್ತರಿಸುತ್ತೇನೆ ಎಂದು ಹೇಳಿದ್ದಾನೆ.
ಸದ್ಯಕ್ಕೆ ನಾನು ಬೆಂಗಳೂರಿನಿಂದ ಹೊರಗಡೆ ಇರುವ ಹಿನ್ನಲೆಯಲ್ಲಿ ನನ್ನಲ್ಲಿರುವ ಸರ್ಟಿಫಿಕೇಟ್ ತೋರಿಸಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿಗೆ ಮರಳಿದ ಬಳಿಕ ಎಲ್ಲದಕ್ಕೂ ಸಾಕ್ಷಿ ಸಮೇತ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾನೆ








