ಬೆಂಗಳೂರು: ಪಕ್ಷದ ಕಾರ್ಯಕರ್ತರಿಗೆ ಭರವಸೆ ಮೂಡಿಸಬೇಕಿದೆ, ನಾನು ಆ ಕೆಲಸವನ್ನು ಮಾಡುತ್ತೇನೆ. ಇಪ್ಪತ್ತೆಂಟು ವಿಧಾನಸಭಾ ಕ್ಷೇತ್ರಗಳಿಗೆ ಹೋಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಜಿ.ಪರಮೇಶ್ವರ್ ಭೇಟಿ ಬಳಿಕ ಮಾತನಾಡಿದ ಅವರು, ಪಕ್ಷದ ಎಲ್ಲಾ ಹಿರಿಯ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ. ಸೋನಿಯಾಗಾಂಧಿ ಅವರು ಘೋಷಿಸಿದಾಗಿನಿಂದಲೇ ನಾನು ಕೆಪಿಸಿಸಿ ಅಧ್ಯಕ್ಷ.. ಕೆಲ ಕಾಂಗ್ರೆಸ್ ಹಿರಿಯ ನಾಯಕರು ಮನೆಯಲ್ಲಿದ್ದಾರೆ, ಅವರನ್ನೆಲ್ಲ ಹುಡುಕಿ ಪಕ್ಷದ ಕೆಲಸಕ್ಕೆ ಕರೆದುಕೊಂಡು ಬರುತ್ತೇನೆ. ಇದು ಅವರಿಂದಲೇ ಇರುವ ಪಕ್ಷ, ಈಗ ಅವರ ಅಗತ್ಯ ಪಕ್ಷಕ್ಕೆ ಬೇಕಿದೆ ಎಂದರು.
ಜೊತೆಗೆ, ನಮ್ಮ ಪಕ್ಷದ ಕಾರ್ಯಕರ್ತರಿಗೆ ಭರವಸೆ ಮೂಡಿಸಬೇಕಿದೆ, ನಾನು ಆ ಕೆಲಸವನ್ನು ಮಾಡುತ್ತೇನೆ. ಇಪ್ಪತ್ತೆಂಟು ವಿಧಾನಸಭಾ ಕ್ಷೇತ್ರಗಳಿಗೆ ಹೋಗಿ ಬ್ಲಾಕ್ ಮಟ್ಟದ ಕಾರ್ಯಕರ್ತರನ್ನ ಭೇಟಿ ಮಾಡುತ್ತೇನೆ. ಅಲ್ಲದೆ ಎಲ್ಲಾ ಶಾಸಕರ ಮನೆಗಳಿಗೂ ನಾನೇ ಹೋಗಿ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು ಪಕ್ಷದ ಹಿರಿಯ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿರುವ ಡಿ.ಕೆ. ಶಿವಕುಮಾರ್ ಹಿರಿಯ ನಾಯಕರನ್ನು ಭೇಟಿಯಾಗುವ ಕಾರ್ಯಕ್ರಮವನ್ನು ಇಂದೂ ಮುಂದುವರೆಸಿದ್ದಾರೆ. ನಿನ್ನೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್. ಮುನಿಯಪ್ಪ, ದಿನೇಶ್ ಗುಂಡೂರಾವ್ ರನ್ನ ಡಿಕೆಎಸ್ ಭೇಟಿಯಾಗಿದ್ದರು.









