ಚಿಕ್ಕಬಳ್ಳಾಪುರ: ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ಅಕ್ರಮ ಬ್ಯಾನರ್ ತೆರವುಗೊಳಿಸಿದ ಏಕೈಕ ಕಾರಣಕ್ಕೆ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಕಾಂಗ್ರೆಸ್ ಮುಖಂಡರೊಬ್ಬರು ದರ್ಪ ಮೆರೆದಿರುವ ಘಟನೆ ಶಿಡ್ಲಘಟ್ಟದಲ್ಲಿ ನಡೆದಿದೆ. ಕೆಪಿಸಿಸಿ ರಾಜ್ಯ ಸಂಯೋಜಕ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ, ಅತ್ಯಂತ ಹೀನಾಯವಾಗಿ ಬೈಗುಳದ ಸುರಿಮಳೆಗೈದು, ಪ್ರಾಣ ಬೆದರಿಕೆ ಹಾಕಿರುವ ಆಡಿಯೋ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.
ನಗರದ ಪ್ರಮುಖ ರಸ್ತೆಯ ಮಧ್ಯಭಾಗದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಜೈದ್ ಖಾನ್ ಅಭಿನಯದ ಕಲ್ಟ್ ಸಿನಿಮಾದ ಪ್ರಚಾರದ ಬ್ಯಾನರ್ ಅನ್ನು ಅಳವಡಿಸಲಾಗಿತ್ತು. ಆದರೆ ಈ ಬ್ಯಾನರ್ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು, ವಾಹನ ಸವಾರರಿಗೆ ಅಪಘಾತದ ಭೀತಿ ಎದುರಾಗಿತ್ತು. ಈ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ತಮ್ಮ ಕರ್ತವ್ಯದ ಭಾಗವಾಗಿ ಪೌರಾಯುಕ್ತೆ ಅಮೃತಾ ಅವರು ಬ್ಯಾನರ್ ತೆರವುಗೊಳಿಸಲು ಸಿಬ್ಬಂದಿಗೆ ಸೂಚಿಸಿದ್ದರು. ಇದೇ ವಿಚಾರ ಈಗ ರಾಜಕೀಯ ನಾಯಕರ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟು ಅಧಿಕಾರಿಯ ಕಣ್ಣೀರಿಗೆ ಕಾರಣವಾಗಿದೆ.
ದೂರವಾಣಿಯಲ್ಲಿ ದರ್ಪ ಮತ್ತು ಅವಾಚ್ಯ ಶಬ್ದಗಳ ಬಳಕೆ
ಬ್ಯಾನರ್ ತೆರವುಗೊಳಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಪೌರಾಯುಕ್ತರಿಗೆ ಕರೆ ಮಾಡಿದ ರಾಜೀವ್ ಗೌಡ, ಏಕಾಏಕಿ ಏರುಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮೇಡಂ ನೀವು ಬ್ಯಾನರ್ ಬಿಚ್ಚೋಕೆ ಹೇಳಿದ್ರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅಮೃತಾ, ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಅಪಘಾತಗಳನ್ನು ತಡೆಯುವ ಸಲುವಾಗಿ ಬ್ಯಾನರ್ ಅನ್ನು ಪಕ್ಕಕ್ಕೆ ಕಟ್ಟಿಕೊಳ್ಳಲು ಸೂಚಿಸಿದ್ದೇನೆ ಎಂದು ಸಮಾಜಾಯಿಷಿ ನೀಡಲು ಯತ್ನಿಸಿದ್ದಾರೆ.
ಆದರೆ ಅಧಿಕಾರಿಯ ಮಾತಿಗೆ ಬೆಲೆ ಕೊಡದ ರಾಜೀವ್ ಗೌಡ, ಬ್ಯಾನರ್ ಬಿಚ್ಚಿದ್ದೀರಿ ಅಂತಾ ಏನಾದರೂ ಗೊತ್ತಾದ್ರೆ, ಬಂದು ಬೆಂಕಿ ಹಚ್ಚಿಸುತ್ತೇನೆ. ನೀವು ನನ್ನ ಒಳ್ಳೆಯತನ ನೋಡಿದ್ದೀರಿ ಆದರೆ, ಕೆಟ್ಟತನ ನೋಡಿಲ್ಲ. ಜನರನ್ನು ದಂಗೆ ಏಳಿಸ್ತೀನಿ, ನಗರಸಭೆಗೆ ಬೆಂಕಿ ಹಾಕಿಸುತ್ತೇನೆ ಮತ್ತು ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಅತ್ಯಂತ ಅಶ್ಲೀಲ ಮತ್ತು ಕೀಳು ಮಟ್ಟದ ಪದಗಳನ್ನು ಬಳಸಿ ನಿಂದಿಸಿದ್ದಾರೆ.
ಶಾಸಕರು ಮತ್ತು ಸಚಿವರಿಗೂ ಬಿಡದ ನಿಂದನೆ
ಕೇವಲ ಮಹಿಳಾ ಅಧಿಕಾರಿಯನ್ನಷ್ಟೇ ಅಲ್ಲದೆ, ರಾಜೀವ್ ಗೌಡ ಅವರು ಸ್ಥಳೀಯ ಶಾಸಕ ಬಿ.ಎನ್. ರವಿಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅವರ ವಿರುದ್ಧವೂ ಹರಿಹಾಯ್ದಿದ್ದಾರೆ. ಕಳೆದ ಬಾರಿಯೂ ಇದೇ ರೀತಿ ಬ್ಯಾನರ್ ತೆಗೆಸಿ ಶಾಸಕರ ಬ್ಯಾನರ್ ಹಾಕಿಸಿದ್ದೀರಿ ಎಂದು ಆರೋಪಿಸಿ, ಜನಪ್ರತಿನಿಧಿಗಳ ವಿರುದ್ಧವೂ ಅಶ್ಲೀಲ ಪದಪ್ರಯೋಗ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಜೀವ್ ಗೌಡ ಅವರ ಈ ಗೂಂಡಾ ವರ್ತನೆ ಮತ್ತು ಅಸಭ್ಯ ಮಾತುಗಳಿಂದ ನೊಂದ ಪೌರಾಯುಕ್ತೆ ಅಮೃತಾ ಅವರು ಕಣ್ಣೀರಿಟ್ಟಿದ್ದಾರೆ. ಸಾರ್ವಜನಿಕ ಸೇವೆ ಮಾಡಲು ಬಂದ ಅಧಿಕಾರಿಗೆ ಈ ರೀತಿಯ ಬೆದರಿಕೆಗಳು ಎದುರಾದರೆ ಕೆಲಸ ಮಾಡುವುದಾದರೂ ಹೇಗೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಇತ್ತ ಕಾಂಗ್ರೆಸ್ ಮುಖಂಡನ ಬೆದರಿಕೆಗೆ ಶಿಡ್ಲಘಟ್ಟ ನಗರಸಭೆಯ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಯಭೀತರಾಗಿದ್ದಾರೆ.
ಆಡಿಯೋ ವೈರಲ್ ಮತ್ತು ಪ್ರತಿಭಟನೆ
ರಾಜೀವ್ ಗೌಡ ಅವರು ಪೌರಾಯುಕ್ತರಿಗೆ ಅವಾಚ್ಯವಾಗಿ ನಿಂದಿಸಿದ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರದಲ್ಲಿ ರಾಜೀವ್ ಗೌಡ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿವೆ. ಮಹಿಳಾ ಅಧಿಕಾರಿಗೆ ರಕ್ಷಣೆ ನೀಡಬೇಕು ಮತ್ತು ಗೂಂಡಾ ವರ್ತನೆ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ರಾಜೀವ್ ಗೌಡ ಸ್ಪಷ್ಟನೆ ಮತ್ತು ಕ್ಷಮೆ
ಘಟನೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ರಾಜೀವ್ ಗೌಡ, ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ. ನಾನು ನಗರಸಭೆಗೆ ಬೆಂಕಿ ಹಾಕಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಆದರೆ ಆವೇಶದಲ್ಲಿ ಅಮೃತಾ ಅವರೊಂದಿಗೆ ನಾನು ಆ ರೀತಿ ಮಾತನಾಡಬಾರದಿತ್ತು. ಬಳಸಿದ ಪದಗಳು ತಪ್ಪು ಎಂದು ಒಪ್ಪಿಕೊಳ್ಳುತ್ತೇನೆ. ಈ ವಿಚಾರವಾಗಿ ನಾನು ಅವರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಹೇಳುವ ಮೂಲಕ ಪ್ರಕರಣಕ್ಕೆ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.
ಕಾನೂನು ಪಾಲನೆ ಮಾಡಲು ಹೋದ ಮಹಿಳಾ ಅಧಿಕಾರಿಯೊಬ್ಬರಿಗೆ ರಾಜಕೀಯ ಮುಖಂಡನೊಬ್ಬ ಸಾರ್ವಜನಿಕವಾಗಿ ಬೆದರಿಕೆ ಹಾಕಿ, ಅಶ್ಲೀಲವಾಗಿ ನಿಂದಿಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ.








