ಬೆಂಗಳೂರು : ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ನಾಯಕತ್ವದ ಬಗ್ಗೆ ಸೋನಿಯಾ ಗಾಂಧಿಗೆ ಪತ್ರ ಬರೆದ 23 ನಾಯಕರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿ, ಇವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಪ್ರತಿಕ್ರಿಯಿಸಿ, ನಾನು ಸಾಯುವವರೆಗೂ ಕಾಂಗ್ರೆಸ್ ನಲ್ಲೇ ಇರುತ್ತೇನೆ ಎಂದು ಭಾವುಕರಾಗಿದ್ದಾರೆ.
ಕಾಂಗ್ರೆಸ್ ಸಭೆ ಬಗ್ಗೆ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಸಾಯುವವರೆಗೂ ಕಾಂಗ್ರೆಸ್ ನಲ್ಲೇ ಇರುತ್ತೇನೆ. ಬಿಜೆಪಿಯ ಪ್ರಶ್ನೆಯೇ ಇಲ್ಲ. ನಾನು ಕಾಂಗ್ರೆಸ್ ಗೆ ನಿಷ್ಠನಾಗಿದ್ದೇನೆ. ನರೇಂದ್ರ ಮೋದಿಯವರಿಗೆ ಕನಸು ಮನಸಿನಲ್ಲೂ ಬೆಂಬಲ ಕೊಟ್ಟಿಲ್ಲ. ನಾವು ಕೇವಲ ಪಕ್ಷದ ಹಿತದೃಷ್ಟಿಯಿಂದ ಪತ್ರ ಬರೆದಿದ್ದೆವು ಎಂದು ಭಾವುಕರಾಗಿ ಹೇಳಿದರು.
ಕಾಂಗ್ರೆಸ್ ನ ಪುನರ್ ಸಂಘಟನೆ ಬಗ್ಗೆ ನೇರವಾಗಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದೆವು. ಅದರಲ್ಲಿ ನಾನು ಕೂಡ ಸಹಿ ಹಾಕಿದ್ದೆ. ನಾವು ಸಹಿ ಹಾಕಿದ ಪತ್ರದಲ್ಲಿ ನಾವು ನಾಯಕತ್ವ ಪ್ರಶ್ನೆ ಮಾಡಿಲ್ಲ. ನಾವು ನೇರವಾಗಿ ಸೋನಿಯಾ ಗಾಂಧಿ ಅವರಿಗೆ ಮಾತ್ರ ಒಂದು ಪ್ರತಿ ಪತ್ರ ಕೊಟ್ಟಿದ್ದೇವೆ. ಆದರೆ ಈ ಪತ್ರ ಲೀಕ್ ಮಾಡಿದವರು ಯಾರು? ಈ ಪತ್ರ ಲೀಕ್ ಮಾಡಿದ ಬಗ್ಗೆ ತನಿಖೆ ನಡೆಸಬೇಕು. ಯಾರು ಲೀಕ್ ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಮೊಯ್ಲಿ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಮುಂದುವರಿದು ಮಾತನಾಡಿದ ಅವರು, ಇಂದಿರಾ ಕಾಂಗ್ರೆಸ್ ಹಾಗೂ ಅರಸು ಕಾಂಗ್ರೆಸ್ ಅಂತ ಇಬ್ಬಾಗ ಆದಾಗಲೂ ಸಹ ಈಗ ಯಾರು ಕಾಂಗ್ರೆಸ್ ಗೆ ವಿಧೇಯರು ಅಂತ ಹೇಳಿಕೊಳ್ಳುತ್ತಿದ್ದಾರೋ ಅವರೆಲ್ಲ ಅರಸು ಜೊತೆ ಹೋಗಿದ್ದರು. ಆದರೆ ನಾವೆಲ್ಲ ಇಂದಿರಾ ಗಾಂಧಿಯವರ ಜೊತೆಯೇ ನಿಂತೆವು. ಕಾಂಗ್ರೆಸ್ ನ ತತ್ವ ಸಿದ್ಧಾಂತಗಳ ನಂಬಿ ಪಕ್ಷದಲ್ಲಿದ್ದೇವೆ ಎಂದು ವಿವರಿಸಿದರು.
2024ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲೇಬೇಕು. ಈಗ ಪುನರ್ ಸಂಘಟನೆಗೆ ಒಂದು ಕಮಿಟಿ ಮಾಡಲಾಗಿದೆ, ಅದನ್ನು ಸ್ವಾಗತಿಸುತ್ತೇವೆ. ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಸೋನಿಯಾ ಗಾಂಧಿಯವರ ಮುಂದುವರಿಕೆ ಸ್ವಾಗತಿಸುತ್ತೇವೆ ಎಂದರು. 








