ಐಸಿಸಿ ಮಹತ್ವದ ಸಭೆ… ಐಸಿಸಿ ಭವಿಷ್ಯ ನಿರ್ಧಾರ.. ಐಪಿಎಲ್‍ಗೆ ಸಿಗುತ್ತಾ ಗ್ರೀನ್ ಸಿಗ್ನಲ್…!
ಇಂದು (ಜುಲೈ 20), ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ -ನವೆಂಬರ್ ನಲ್ಲಿ ನಡೆಯಬೇಕಿದ್ದ ಐಸಿಸಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಭವಿಷ್ಯವನ್ನು ನಿರ್ಧಾರ ಮಾಡಲಾಗುವುದು. ಒಂದು ವೇಳೆ ಐಸಿಸಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ರದ್ದುಗೊಳಿಸಿದ್ರೆ, ಬಿಸಿಸಿಐನ ಪ್ರತಿಷ್ಠಿತ ಐಪಿಎಲ್ ಟೂರ್ನಿಗೆ ಗ್ರೀನ್ ಸಿಗ್ನಲ್ ಸಿಕ್ಕಂತಾಗುತ್ತದೆ.
ಬಿಸಿಸಿಐ ಸೇರಿದಂತೆ ಹಲವು ಕ್ರಿಕೆಟ್ ಸಂಸ್ಥೆಗಳು ಐಸಿಸಿಯ ನಿರ್ಧಾರವನ್ನು ಎದುರು ನೋಡುತ್ತಿದೆ. ಒಂದು ವೇಳೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಮುಂದೂಡಿದ್ರೆ ಕ್ರಿಕೆಟ್ ಸಂಸ್ಥೆಗಳು ದ್ವಿಪಕ್ಷೀಯ ಸರಣಿಗಳನ್ನು ನಡೆಸಲು ಯೋಜನೆ ರೂಪಿಸಲು ಸಾಧ್ಯವಾಗುತ್ತದೆ. ಅದ್ರಲ್ಲೂ ಬಿಸಿಸಿಐ ಐಸಿಸಿ ನಿರ್ಧಾರವನ್ನು ಕಾತರದಿಂದ ಎದುರು ನೋಡುತ್ತಿದೆ. ಕೋವಿಡ್ -19 ಸೋಂಕುವಿನಿಂದಾಗಿ ಈಗಾಗಲೇ ಯಾವುದೇ ಕ್ರಿಕೆಟ್ ಚಟುವಟಿಕೆಗಳು ನಡೆಯುತ್ತಿಲ್ಲ. ಈ ನಡುವೆ ಇಂಗ್ಲೆಂಡ್ ನಲ್ಲಿ ಮಾತ್ರ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ನಡೆಯುತ್ತಿದೆ. ಇನ್ನುಳಿದಂತೆ ಯಾವುದೇ ರಾಷ್ಟ್ರದಲ್ಲಿ ಕ್ರಿಕೆಟ್ ಚಟುವಟಿಕೆಗಳು ಶುರುವಾಗಿಲ್ಲ.
ಇನ್ನೊಂದೆಡೆ ಐಸಿಸಿ ಟಿ-ಟ್ವೆಂಟಿ ಟೂರ್ನಿಯನ್ನು ರದ್ದುಗೊಳಿಸಿದ್ರೆ, ಬಿಸಿಸಿಐ ಸೆಪ್ಟಂಬರ್ 26ರಿಂದ ನವೆಂಬರ್ 6ರವರೆಗೆ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಈಗಾಗಲೇ ಪ್ಲಾನ್ ಮಾಡಿಕೊಂಡಿದೆ. ಮೊನ್ನೆ ನಡೆದ ಬಿಸಿಸಿಐ ಅಪೆಕ್ಸ್ ಸಮಿತಿಯ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಸಿದ್ದು, ಅಂತಿಮ ನಿರ್ಧಾರವನ್ನು ಐಸಿಸಿ ನಿರ್ಧಾರದ ಬಳಿಕ ತೀರ್ಮಾನಿಸಲಾಗುವುದು. ಈ ನಡುವೆ ಐಪಿಎಲ್ ಫ್ರಾಂಚೈಸಿಗಳು ಕೂಡ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಟೂರ್ನಿಯಲ್ಲಿ ಭಾಗಿಯಾಗಲು ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿವೆ.
ಎಲ್ಲವೂ ಅಂದುಕೊಂಡಂತೆ ನಡೆದ್ರೆ, ಯುಎಇನಲ್ಲಿ 2020ರ ಐಪಿಎಲ್ ಟೂರ್ನಿ ನಡೆಯಲಿದೆ. ಅಂದ ಹಾಗೇ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಐಪಿಎಲ್ ಟೂರ್ನಿ ಎರಡನೇ ಬಾರಿ ನಡೆಯಲಿದೆ. ಈ ಹಿಂದೆ 2014ರಲ್ಲಿ ಲೋಕ ಸಭೆ ಚುನಾವಣೆಯ ಕಾರಣದಿಂದ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಸಂಘಟಿಸಿತ್ತು. ಒಟ್ಟಿನಲ್ಲಿ ಐಪಿಎಲ್ ಭವಿಷ್ಯ ಐಸಿಸಿ ಸಭೆಯ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಇವತ್ತಿನ ಐಸಿಸಿ ಸಭೆ ಹೆಚ್ಚಿನ ಮಹತ್ವ ಪಡೆದುಕೊಳ್ಳಲಿದೆ.








