ಲಂಕಾ ಬಾಂಗ್ಲಾ ಆಟಗಾರರಿಗೆ ದಂಡ ವಿಧಿಸಿದ ಐಸಿಸಿ
ಭಾನುವಾರ ಶಾರ್ಜಾದಲ್ಲಿ ನಡೆದಿದ್ದ ಶ್ರೀಲಂಕ vs ಬಾಂಗ್ಲಾ T 20 ಪಂದ್ಯದಲ್ಲಿ ಪರಸ್ಪರ ಕಿತ್ತಾಡಿಕೊಂಡಿದ್ದ ಎರಡು ತಂಡದ ಆಟಗಾರರಿಗೆ ಐಸಿಸಿ ದಂಡ ವಿಧಿಸಿ ಆದೇಶಿಸಿದೆ. ಐಸಿಸಿ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ನೀತಿ ಸಣಹಿತೆ ಉಲ್ಲಂಘಿಸಿದ್ದ ಕಾರಣಕ್ಕೆ ಪಂದ್ಯದ ಶೇಕಡ 15 ರಷ್ಟು ದಂಡವನ್ನ ವಿಧಿಸಿದೆ.
ಶ್ರೀಲಂಕಾ ತಂಡದ ವೇಗದ ಬೌಲರ್ ಲಹಿರು ಕುಮಾರ ಹಾಗೂ ಬಾಂಗ್ಲಾದೇಶದ ಬ್ಯಾಟರ್ ಲಿಟನ್ ದಾಸ್‌ಗೆ ಐಸಿಸಿ ದಂಡವನ್ನು ವಿಧಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಈ ಇಬ್ಬರೂ ಆಟಗಾರರು ಮೈದಾನದಲ್ಲಿ ಸಂಯಮ ಮರೆತು ಮಾತಿನ ಚಕಮಕಿಯಲ್ಲಿ ತೊಡಗಿಸಿಕೊಂಡಿದ್ದರು. ಇದು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು.
ಬಾಂಗ್ಲಾದೇಶ ತಂಡ ಬ್ಯಾಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಲಿಟನ್ ದಾಸ್ ಲಂಕಾ ವೇಗಿ ಲಹಿರು ಕುಮಾರಾಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದ ವೇಳೆ ಲಂಕಾ ವೇಗಿ ಕೆರಳುವಂತೆ ವರ್ತಿಸಿದ್ದರು. ಇಬ್ಬರು ಕೂಡ ಕೆಲ ಕಠಿಣ ಶಬ್ದಗಳ ಮೂಲಕ ವಾಗ್ದಾಳಿ ನಡೆಸಿ ತಳ್ಳಾಟವನ್ನು ಕೂಡ ನಡೆಸಿಕೊಂಡರು. ನಂತರ ಇತರ ಆಟಗಾರರು ಹಾಗೂ ಅಂಪಯರ್ ಮಧ್ಯ ಪ್ರವೇಶಿಸಿದ್ದರು.
ಈ ಪಂದ್ಯದ ಬಳಿಕ ಇಬ್ಬರು ಆಟಗಾರರು ತಪ್ಪೊಪ್ಪಿಕೊಂಡಿರುವುದರಿಂದ ಯಾವುದೇ ವಿಚಾರಣೆ ಇಲ್ಲದೆ ಕೇವಲ ದಂಡವನ್ನಷ್ಟೆ ವಿಧಿಸಲಾಗಿದೆ.