ICC ODI World cup 2023 – ತೆರೆದಂತಿದೆ ಟೀಮ್ ಇಂಡಿಯಾದ ಭಾಗ್ಯದ ಬಾಗಿಲು..!
ಏಕದಿನ ವಿಶ್ವಕಪ್ ಗೆಲ್ಲುವ ಟೀಮ್ ಇಂಡಿಯಾದ ಭಾಗ್ಯದ ಬಾಗಿಲು ತೆರೆದಂತೆ ಭಾಸವಾಗುತ್ತಿದೆಯಾ…? ಹೌದು, 12 ವರ್ಷಗಳ ಬಳಿಕ ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಅಕ್ಟೋಬರ್ 5ರಿಂದ ಆರಂಭವಾಗಲಿರೋ ಏಕದಿನ ವಿಶ್ವಕಪ್ ಟೂರ್ನಿಗೆ ತಂಡಗಳು ಸನ್ನದ್ದವಾಗುತ್ತಿದೆ.
ಸದ್ಯ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿ ಏಷ್ಯಾಕಪ್ ಟೂರ್ನಿಗೆ ರೆಡಿಯಾಗಬೇಕಿದೆ. ಆ ಬಳಿಕ ವಿಶ್ವಕಪ್ ಆಶ್ವಮೇಧಕ್ಕೆ ಟೀಮ್ ಇಂಡಿಯಾ ತಯಾರಿ ನಡೆಸಲಿದೆ. ಹಾಗೇ ನೋಡಿದ್ರೆ ಈ ಬಾರಿಯ ವಿಶ್ವಕಪ್‍ಗೆ ಟೀಮ್ ಇಂಡಿಯಾದ ಪೂರ್ವ ತಯಾರಿ ಅಷ್ಟೊಂದು ಸೀರಿಯಸ್ ಆಗಿ ಕಾಣತ್ತಿಲ್ಲ. ತಂಡದ ಕಾಂಬಿನೇಷನ್ ಬಗ್ಗೆ ಇನ್ನೂ ಕೂಡ ಗೊಂದಲಗಳಿವೆ. ಆದ್ರೂ ಟೀಮ್ ಇಂಡಿಯಾ ತವರಿನ ಲಾಭ ಪಡೆದು ಮೂರನೇ ಬಾರಿ ಏಕದಿನ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದೆ.
ಇದಕ್ಕೆ ಪೂರಕವಾಗಿ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಈ ಬಾರಿ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಮೂರನೇ ವಿಶ್ವಕಪ್ ಆಡ್ತಿರೋ ರೋಹಿತ್ ಶರ್ಮಾಗೆ ಇದು ಕೊನೆಯ ವಿಶ್ವಕಪ್ ಟೂರ್ನಿಯಾಗಲಿದೆ. ಹಾಗೇ 2011ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ವಿರಾಟ್ ಕೊಹ್ಲಿಗೂ ಕಡೆಯ ವಿಶ್ವಕಪ್. ಹೀಗಾಗಿ ಈ ಬಾರಿ ಟ್ರೋಫಿ ಗೆಲ್ಲಲೇಬೇಕು ಎಂಬ ಹಠ ಟೀಮ್ ಇಂಡಿಯಾದ್ದು. ಅಷ್ಟೇ ಅಲ್ಲ, ಕೋಟ್ಯಂತರ ಭಾರತೀಯರ ಹೃದಯಬಡಿತವೂ ಅದೇ ಆಗಿದೆ. ಅದು, ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಬೇಕು ಎಂಬುದು.
ಅಂದ ಹಾಗೇ, ಕ್ಯಾಪ್ಟನ್ ರೋಹಿತ್ ಶರ್ಮಾ ಈ ಹಿಂದಿನ ವಿಶ್ವಕಪ್ ಟೂರ್ನಿಗಳ ಸಾಧನೆಗಳನ್ನು ನೆನಪು ಮಾಡಿಕೊಂಡಿದ್ದಾರೆ. 2003ರಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದ ಫೈನಲ್‍ನಲ್ಲಿ ಎಡವಿತ್ತು. 2007ರಲ್ಲಿ ಲೀಗ್ ಹಂತದಲ್ಲೇ ನಿರಾಸೆ ಅನುಭವಿಸಿತ್ತು. ಆದ್ರೆ 2011ರಲ್ಲಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್‍ಪಟ್ಟಕ್ಕೇರಿತ್ತು. ಆದ್ರೆ ಆ ಪಂದ್ಯವನ್ನು ನಾನು ಮೈದಾನಕ್ಕೆ ಹೋಗಿ ನೋಡಲಿಲ್ಲ. ಮುಖ್ಯವಾಗಿ ನಾನು ತಂಡದ ಭಾಗವಾಗಿರಲಿಲ್ಲ. ಹೀಗಾಗಿ ಸ್ವಲ್ಪ ನಿರಾಸೆಯಾಗಿತ್ತು. ಆದ್ರೂ ಮನೆಯಲ್ಲೇ ಕೂತು ಪಂದ್ಯವನ್ನು ವೀಕ್ಷಿಸಿದ್ದೆ. ಗೆಲುವಿನ ಸಂಭ್ರಮವನ್ನು ಆನಂದಿಸಿದ್ದೆ ಎಂದು ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.
ಇನ್ನು 2015ರಲ್ಲಿ ಮತ್ತು 2019ರಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದೆ. ಎರಡು ಟೂರ್ನಿಗಳಲ್ಲೂ ಸೆಮಿಫೈನಲ್‍ನಲ್ಲಿ ಸೋಲು ಅನುಭವಿಸಬೇಕಾಯ್ತು. ಆದ್ರೆ ಈ ಬಾರಿ ಮತ್ತೆ ತವರಿನಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ತವರು ಅಭಿಮಾನಿಗಳ ಬೆಂಬಲದೊಂದಿಗೆ ಅವರ ನಿರೀಕ್ಷೆಗೆ ತಕ್ಕಂತೆ ಆಡಿ ಟ್ರೋಫಿ ಗೆಲ್ಲಬೇಕು ಎಂಬುದು ಅವರ ವಿಶ್ವಾಸದ ನುಡಿ.
ಇನ್ನು ರೋಹಿತ್ ಶರ್ಮಾ 2019ರ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಟೂರ್ನಿಯಲ್ಲಿ ಐದು ಶತಕಗಳನ್ನು ಸಿಡಿಸಿ ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸಿದ್ದರು. ಅದೇ ರೀತಿ ಈ ಬಾರಿಯೂ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡ್ತಾರೆ ಅನ್ನೋ ನಂಬಿಕೆ ಕ್ರಿಕೆಟ್ ಅಭಿಮಾನಿಗಳದ್ದು.
ನನಗೆ ಗೊತ್ತು.. ತವರು ಅಭಿಮಾನಿಗಳು ಭಾರೀ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆಡುವ ಪ್ರತಿ ಮೈದಾನದಲ್ಲೂ ಟೀಮ್ ಇಂಡಿಯಾವನ್ನು ಬೆಂಬಲಿಸೋ ಅಭಿಮಾನಿಗಳಿದ್ದಾರೆ. ಅದಕ್ಕೆ ತಕ್ಕಂತೆ ನಾವು ರೆಡಿಯಾಗಬೇಕು. ವಿಶ್ವಕಪ್ ಟೂರ್ನಿಯ ಪಂದ್ಯಗಳು ಟೆಸ್ಟ್ ಪಂದ್ಯಗಳಂತೆ ಅಲ್ಲ. ಇಲ್ಲಿ ಪ್ರತಿ ದಿನ ಹೊಸತು.. ಹೊಸ ಸವಾಲು. ಸವಾಲಿಗೆ ತಕ್ಕಂತೆ ನಾವು ಆಡಬೇಕು. ಆಗ ಮಾತ್ರ ಯಶ ಸಾಧಿಸಲು ಸಾಧ್ಯ ಅಂತ ರೋಹಿತ್ ಶರ್ಮಾ ಹೇಳಿದ್ದಾರೆ.
ಒಟ್ಟಿನಲ್ಲಿ ಟೀಮ್ ಇಂಡಿಯಾ ಸೈಲೆಂಟ್ ಆಗಿಯೇ ವಿಶ್ವಕಪ್ ಸಮರಕ್ಕೆ ಸನ್ನದ್ದವಾಗುತ್ತಿದೆ. 12 ವರ್ಷಗಳ ನಂತರ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಪಟ್ಟಕ್ಕೇರಲಿ ಎಂಬುದು ಕೋಟಿ ಕೋಟಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹಾರೈಕೆ.