ಐಸಿಸಿ ಟಿ-20 ಶ್ರೇಯಾಂಕ ಪಟ್ಟಿ- ಎರಡನೇ ಸ್ಥಾನದಲ್ಲಿ ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್ ಐಸಿಸಿ ಟಿ-ಟ್ವೆಂಟಿ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ಹೊಸ ಶ್ರೇಯಾಂಕ ಪಟ್ಟಿಯಲ್ಲಿ ರಾಹುಲ್ ಒಂದು ಸ್ಥಾನ ಮುಂಬಡ್ತಿ ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್ ಡೇವಿಡ್ ಮಲಾನ್ ಅವರು 915 ಅಂಕಗಳೊಂದಿಗೆ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ರಾಹುಲ್ 816 ಅಂಕ ಪಡೆದುಕೊಂಡಿದ್ದಾರೆ.
ಇನ್ನು ಆಸ್ಟ್ರೇಲಿಯಾ ಆರೋನ್ ಫಿಂಚ್ ಅವರು 808 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ರೆ, ಪಾಕಿಸ್ತಾನದ ಬಾಬರ್ ಅಜಾಂ ಅವರು 801 ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಹಾಗೇ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ 697 ಅಂಕ ಗಿಟ್ಟಿಸಿಕೊಂಡು ಏಳನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆ, ಟಾಪ್ ಟೆನ್ ಲಿಸ್ಟ್ ನಲ್ಲಿ ಭಾರತದ ಇಬ್ಬರು ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ.
ಹಾಗೇ ಬೌಲಿಂಗ್ ವಿಭಾಗದಲ್ಲಿ ಅಫಘಾನಿಸ್ತಾನದ ರಶೀದ್ ಖಾನ್ ಅವರು ಅಗ್ರ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೇಝ್ ಶಂಶಿ ಅವರು ಪಾಕ್ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆಡಮ್ ಝಂಪಾ, ಇಂಗ್ಲೆಂಡ್ ನ ಆದಿಲ್ ರಶೀದ್, ಅಫಘಾನಿಸ್ತಾನದ ಮುಜೀಬರ್ ರೆಹಮಾನ್ ಅವರಿದ್ದಾರೆ.
ಇನ್ನು ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಇಂಗ್ಲೆಂಡ್, ಆಸ್ಟ್ರೇಲಿಯಾ ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದುಕೊಂಡ್ರೆ, ಭಾರತ ಮತ್ತು ಪಾಕಿಸ್ತಾನ ತಲಾ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಐದನೇ ಸ್ಥಾನದಲ್ಲಿದೆ.