ಐಸಿಸಿ ವಿಶ್ವ ಟೆಸ್ಟ್ ಶ್ರೇಯಾಂಕ ಪಟ್ಟಿ- ಅಗ್ರ ಸ್ಥಾನದಲ್ಲಿ ಭಾರತ, ಮೂರನೇ ಸ್ಥಾನದಲ್ಲಿದೆ ಇಂಗ್ಲೆಂಡ್
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-1ರಿಂದ ಗೆದ್ದುಕೊಂಡಿದೆ. ಮೊದಲ ಟೆಸ್ಟ್ ಪಂದ್ಯವನ್ನು ಸೋತ ನಂತರ ವೆಸ್ಟ್ ಇಂಡೀಸ್ ವಿರುದ್ಧ ಆಂಗ್ಲರು ತಿರುಗಿ ಬಿದ್ದಿದ್ದಾರೆ. ಹೀಗಾಗಿ ತವರಿನಲ್ಲಿ ಸರಣಿ ಸೋಲಿನ ಆತಂಕದಲ್ಲಿದ್ದ ಇಂಗ್ಲೆಂಡ್ ತಂಡದ ಸಾಂಘಿಕ ಆಟಕ್ಕೆ ಕೆರೆಬಿಯನ್ನರು ತಲೆಬಾಗಲೇಬೇಕಾಯ್ತು.
ಈ ಟೆಸ್ಟ್ ಸರಣಿ ಶುರುವಾಗುವುದಕ್ಕಿಂತ ಮುನ್ನ ಇಂಗ್ಲೆಂಡ್ ನಾಲ್ಕನೇ ಸ್ಥಾನದಲ್ಲಿತ್ತು. ಇದೀಗ ಸರಣಿಯನ್ನು ಗೆದ್ದ ನಂತರ ಮೂರನೇ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಇದ್ರಿಂದ 180 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ವೆಸ್ಟ್ ಇಂಡೀಸ್ ಏಳನೇ ಸ್ಥಾನದಲ್ಲಿದೆ.
ಇನ್ನು ಟೀಮ್ ಇಂಡಿಯಾ 360 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಕಳೆದ ನಾಲ್ಕೈದು ತಿಂಗಳುಗಳಿಂದ ಟೀಮ್ ಇಂಡಿಯಾ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಆಸ್ಟ್ರೇಲಿಯಾ 296 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದೀಗ ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಆಗಸ್ಟ್ 5ರಿಂದ ಪಾಕ್ ವಿರುದ್ಧದ ಟೆಸ್ಟ್ ಸರಣಿ ಶುರುವಾಗಲಿದೆ.