ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಮಿಶ್ರಣ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಸಚಿವ ಎಂ.ಬಿ. ಪಾಟೀಲ್ ತನಿಖೆಗೆ ಆಗ್ರಹಿಸಿದ್ದಾರೆ.
ಭಕ್ತರ, ಜನರ ಭಾವನೆಗಳ ಜೊತೆ ಆಟ ಆಡುವುದು ಸರಿಯಲ್ಲ. ಪ್ರಸಾದದಲ್ಲಿ ಪಾವಿತ್ರ್ಯತೆ ಇದೆ. ದನದ ಕೊಬ್ಬು ಬೆರೆಸುವುದು ತೀವ್ರವಾದ, ಘೋರವಾದ ಅಪರಾಧ. ಆಗಾಗ ಪ್ರಸಾದದ ತಪಾಸಣೆ ಮಾಡಬೇಕಿತ್ತು. ಈ ಕೃತ್ಯದಲ್ಲಿ ಯಾರು ಭಾಗಿಯಾಗಿದ್ದಾರೋ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಶಾಸಕ ಮುನಿರತ್ನ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ಸ್ವಾಭಾವಿಕವಾಗಿ ಯಾರೂ ಊಹಿಸದ ಆಪಾದನೆಗಳು ಅವರ ಮೇಲೆ ಬರುತ್ತಿವೆ. ಎಲ್ಲದರ ಕುರಿತು ತನಿಖೆ ಆಗಲಿ. ನಿಜವಾಗಿಯೂ ಘೋರ ಕೃತ್ಯ ಎಸಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಲಿದೆ. ಇದೇ ಮೊದಲ ಬಾರಿಗೆ ಇಂತಹ ಆರೋಪ ಕೇಳಿ ನಾನು ಗಾಬರಿಯಾದೆ. ಹನಿಟ್ರ್ಯಾಪ್, ಸಿಡಿ ಮಾಡೋದು, ಹೆಣ್ಣು ಮಕ್ಕಳ ಬಳಕೆ ಇವೆಲ್ಲ ಹೇಯ ಕೃತ್ಯಗಳು ಎಂದು ಗುಡುಗಿದ್ದಾರೆ.
ಆಡಳಿತದಲ್ಲಿ ರಾಜ್ಯಪಾಲರು ಹಸ್ತಕ್ಷೆಪ ಮಾಡಬಾರದು. ಎಲ್ಲರೂ ಹೋಗಿ ರಾಜ್ಯಪಾಲರಿಗೆ ದೂರು ಕೊಡುವುದು, ಅವರು ಅದನ್ನು ಪರಿಗಣಿಸುವುದು ಆಗಬಾರದು. ಹೀಗೆ ಆದರೆ ಪೊಲೀಸ್ ಸ್ಟೇಷನ್ ಬದಲು ರಾಜ್ಯಪಾಲಿಗೆ ದೂರು ಕೊಡೋದು ಮಾಡುತ್ತಾರೆ. ಇದೇ ಒಂದು ಹೊಸ ದಂಧೆಯಾಗುತ್ತದೆ. ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿ ಆಗಿದೆ. ರಾಜ್ಯಪಾಲರು ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಗುಡುಗಿದ್ದಾರೆ.