ಅಯೋಧ್ಯೆ : ರಾಮ ಜನ್ಮ ಭೂಮಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಕಳೆದ 10 ದಿನಗಳಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಸಮತಟ್ಟು ಮಾಡುವ ಕೆಲಸ ನಡೆಯತ್ತಿದ್ದು, ಈ ವೇಳೆ ಮರಳುಗಲ್ಲಿನ ದೇವರ, ದೇವತೆಗಳ ಮೂರ್ತಿ, ಕೆತ್ತನೆ ಕಲಾಕೃತಿ ಹಾಗೂ ಶಿವಲಿಂಗ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
ಅಧಿಕೃತ ಪತ್ರಿಕಾ ಪ್ರಕಟಣೆ ಪ್ರಕಾರ, ಅಯೋಧ್ಯೆಯ ಆವರಣದಲ್ಲಿ ಕಳೆದ ಹತ್ತು ದಿನಗಳಿಂದ ಮಂದಿರ ನಿರ್ಮಾಣ ಮಾಡೋಕೆ ಸ್ಥಳವನ್ನು ಸಮತಟ್ಟು ಮಾಡಲಾಗುತ್ತಿದೆ. ಈ ವೇಳೆ ಮರಳುಗಲ್ಲಿನಲ್ಲಿ ಕೆತ್ತಿದ ಕೆತ್ತನೆ, ಕಲಾಕೃತಿ, ದೇವರ ವಿಗ್ರಹ ಮತ್ತು 5 ಅಡಿ ಎತ್ತರದ ಶಿವಲಿಂಗ ರಾಮ ಜನ್ಮಭೂಮಿಯ ಆವರಣದಲ್ಲಿ ದೊರಕಿರುವುದಾಗಿ ಎಂದು ವರದಿ ತಿಳಿಸಿದೆ.
ಇನ್ನು ಈ ಬಗ್ಗೆ ಅಯೋಧ್ಯೆಯ ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಜನರಲ್ ಸೆಕ್ರೆಟರಿ ಚಂಪತ್ ರಾಯ್ ಪ್ರತಿಕ್ರಿಯೆ ನೀಡಿದ್ದು, ಭೂಮಿ ಸ್ವಚ್ಛತಾ ಕೆಲಸದ ಸಂದರ್ಭದಲ್ಲಿ ಹಲವು ಪಿಲ್ಲರ್ ಗಳು ಮತ್ತು ಮರಳುಗಲ್ಲಿನಲ್ಲಿ ದೇವರ ಚಿತ್ರಗಳನ್ನು ಕೆತ್ತಿರುವುದು ಪತ್ತೆಯಾಗಿದೆ. ಕುಬೇರ್ ಟೀಲಾದಲ್ಲಿ ಶಿವಲಿಂಗ ದೊರಕಿದೆ.
ಅಯೋಧ್ಯೆಯ ಜಿಲ್ಲಾಡಳಿತ ಅನುಮತಿ ನೀಡಿದ ಬಳಿಕ ಮೇ 11ರಿಂದ ಕೆಲಸ ಆರಂಭಿಸಲಾಗಿತ್ತು, ಅಂದಿನಿಂದ ಈವರೆಗೆ ನಡೆಸಿದ ಉತ್ಖನನದಲ್ಲಿ ಹಲವಾರು ರೀತಿಯ ವಸ್ತುಗಳು ಸಿಕ್ಕಿವೆ. ಕಲ್ಲಿನಲ್ಲಿ ಕೆತ್ತಿದ ಹೂವು, ಕಳಶ, ದೇವತೆಗಳ ಕೆತ್ತನೆ ದೊರಕಿದೆ ಎಂದು ತಿಳಿಸಿದ್ದಾರೆ.
ಇನ್ನು ರಾಮ ದೇವಸ್ಥಾನ ನಿರ್ಮಾಣ ಮುಗಿಯುವವರೆಗೆ ರಾಮ್ ಲಲ್ಲಾ ಮೂರ್ತಿಯನ್ನು ತಾತ್ಕಾಲಿಕವಾಗಿ ರಾಮ ಜನ್ಮಭೂಮಿಯಲ್ಲಿರುವ ಮಾನಸ್ ಭವನ್ ಹತ್ತಿರ ತಾತ್ಕಾಲಿಕ ಕಟ್ಟಡಕ್ಕೆ ಕಳೆದ ಮಾರ್ಚ್ ನಲ್ಲಿ ಸ್ಥಳಾಂತರಿಸಲಾಗಿದೆ.
ಅಯೋಧ್ಯೆ ಕುರಿತು ಕಳೆದ ವರ್ಷ ನವೆಂಬರ್ 9ರಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ರಾಮಮಂದಿರವನ್ನು ನಿರ್ಮಿಸಲು ಅಯೋಧ್ಯೆ ಸ್ಥಳವನ್ನು ಕೇಂದ್ರಕ್ಕೆ ಹಸ್ತಾಂತರಿಸಿ ನಿರ್ದೇಶನ ನೀಡಿತ್ತು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಕೇಂದ್ರ ಸರ್ಕಾರ 15 ಜನಸ ಸದಸ್ಯರನ್ನೊಳಗೊಂಡ ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ರಚಿಸಿದೆ.








