ಚೀನಾ ನಮ್ಮ ಭೂಮಿ ಆಕ್ರಮಿಸಿಲ್ಲ ಎಂದಾದರೆ ಅದು ಚೀನಾಕ್ಕೆ ಲಾಭ ನೀಡುತ್ತದೆ – ರಾಹುಲ್ ಗಾಂಧಿ
ಹೊಸದಿಲ್ಲಿ, ಜೂನ್ 28: ಲಡಾಖ್ ಘರ್ಷಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಮೇಲಿನ ದಾಳಿಯನ್ನು ಮುಂದುವರೆಸಿದ್ದಾರೆ. ಚೀನಾ ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆಯೇ ಎಂಬ ಬಗ್ಗೆ ದೇಶಕ್ಕೆ ಸತ್ಯವನ್ನು ತಿಳಿಸುವಂತೆ ಕೇಳಿಕೊಂಡಿದ್ದಾರೆ.
ಲಡಾಖ್ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಭಾರತದ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆಯೇ ಎನ್ನುವ ವಿಚಾರವಾಗಿ ಭಯಪಡದೆ ಸತ್ಯವನ್ನು ಹೇಳಬೇಕು ಎಂದು ಕೇಳಿಕೊಂಡಿದ್ದಾರೆ. ಸೇನೆ ಮತ್ತು ಸರ್ಕಾರದೊಂದಿಗೆ ಇಡೀ ದೇಶವೇ ಒಂದಾಗಿ ನಿಂತಿದೆ. ಆದರೆ ಒಂದು ನಿರ್ಣಾಯಕ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿಲ್ಲ. ಪ್ರಧಾನಿ ಕೆಲವು ದಿನಗಳ ಹಿಂದೆ ಚೀನಾ ಭಾರತದ ಒಂದು ಇಂಚು ಭೂಮಿಯನ್ನು ಆಕ್ರಮಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಆದರೆ ಉಪಗ್ರಹದ ಫೋಟೋಗಳು, ಲಡಾಖ್ ನ ಜನರು ಮತ್ತು ನಿವೃತ್ತ ಜನರಲ್ ಗಳು ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಹೇಳುತ್ತಿದ್ದಾರೆ.
ಪ್ರಧಾನಿ ಜಿ, ನೀವು ಸತ್ಯವನ್ನು ಮಾತನಾಡಿ, ನೀವು ದೇಶಕ್ಕೆ ಸತ್ಯವನ್ನು ತಿಳಿಸಬೇಕು.. ಭಯಪಡಬೇಡಿ. ಯಾವುದೇ ಭೂಮಿಯನ್ನು ನಿಜವಾಗಿಯೂ ಚೀನಾ ಆಕ್ರಮಿಸಿಲ್ಲ ಎಂದಾದರೆ ಅದು ಚೀನಾಕ್ಕೆ ಪ್ರಯೋಜನವನ್ನು ನೀಡುತ್ತದೆ.
ನಾವೆಲ್ಲರೂ ಒಗ್ಗಟ್ಟಾಗಿ ಚೀನಾದ ವಿರುದ್ಧ ಹೋರಾಡಬೇಕು, ಅವರನ್ನು ಎದುರಿಸಬೇಕು. ಆದ್ದರಿಂದ ನೀವು ಭಯಪಡದೆ ಸತ್ಯವನ್ನು ಮಾತನಾಡಿ. ಹೌದು, ಚೀನಾ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದೆ ಮತ್ತು ನಾವು ಅದರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿ. ಇಡೀ ಭಾರತ ನಿಮ್ಮೊಂದಿಗೆ ನಿಂತಿದೆ ಎಂದು ಅವರು ಹೇಳಿದರು.