ಹಾಸನ : ರಾಜ್ಯ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಮಯ ಬಂದಾಗ ಎಳೆಎಳೆಯಾಗಿ ತಿಳಿಸುವೆ. ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ನಡೆಯುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಆರೋಪಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯ ಜನ ಏನು ಮಾಡಿದ್ದಾರೆ. ಜುಲೈ ತಿಂಗಳು ಕಳೆದರೂ ನಾಲೆಗಳಿಗೆ ನೀರು ಬಿಟ್ಟಿಲ್ಲ. ಸರ್ಕಾರ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು. ಹನ್ನೆರಡು ತಿಂಗಳಿಂದ ಯಾವುದೇ ಹೊಸ ನೀರಾವರಿ ಯೋಜನೆ ಆರಂಭಿಸಿಲ್ಲ. ಹಾಸನ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ ಎಂದ ರೇವಣ್ಣ, ಸರ್ಕಾರ ದ್ವೇಷದ ರಾಜಕಾರಣ ಮಾಡಿದರೆ ಹೋರಾಟ ಅನಿವಾರ್ಯ ಎಚ್ಚರಿಕೆ ನೀಡಿದರು.
ಇನ್ನು ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರ ಸಭೆ ಕರೆದು, ಎಲ್ಲರ ಅಭಿಪ್ರಾಯ ಪಡೆದು ಸಿಎಂಗೆ ಪತ್ರ ಬರೆಯುತ್ತೇನೆ. ನಮ್ಮ ಪತ್ರಕ್ಕೆ ಸ್ಪಂದಿಸದಿದ್ದರೆ ದೇವೇಗೌಡರೊಂದಿಗೆ ಶಾಂತಿಯಿಂದ ಹೋರಾಟ ಮಾಡಬೇಕಾಗುತ್ತದೆ. ತಾಳ್ಮೆಯಿಂದ ಹನ್ನೆರಡು ತಿಂಗಳು ಕಾದಿದ್ದೇವೆ. ಜೆಡಿಎಸ್ ಶಾಸಕರು ಸುಮ್ಮನಿದ್ದಾರೆ ಎಂದು ಭಾವಿಸುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ರೇವಣ್ಣ ವಾಗ್ದಾಳಿ ನಡೆಸಿದರು.








