ಹೊಸದಿಲ್ಲಿ, ಜೂನ್ 4: ಭಾರತ ಮತ್ತು ಚೀನಾ ನಡುವೆ ಯುದ್ಧವಾದರೆ, ರಷ್ಯಾ ಭಾರತದೊಂದಿಗೆ ನಿಲ್ಲುತ್ತದೆ ಎಂದು ರಷ್ಯಾದ ಅತಿದೊಡ್ಡ ಮೀಡಿಯಾ ಹೌಸ್ ರಷ್ಯನ್ ಟಿವಿ ಸ್ಪಷ್ಟಪಡಿಸಿದೆ.
ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣವಿದ್ದು ಈ ಉದ್ವಿಗ್ನತೆಯನ್ನು ಚೀನಾ ಹೆಚ್ಚಿಸುತ್ತಿದೆ. ಚೀನಾ ತನ್ನ ಸೈನ್ಯವನ್ನು ಸಿಕ್ಕಿಂ ಮತ್ತು ಲಡಾಕ್ ಗಡಿಯಲ್ಲಿ ಜಮಾಯಿಸಿದ್ದು, ಇದಕ್ಕೆ ಪ್ರತಿಯಾಗಿ ಮುನ್ನೆಚ್ಚರಿಕೆ ದೃಷ್ಟಿಯಿಂದ ಭಾರತ ಕೂಡ ತನ್ನ ಸೇನೆಯನ್ನು ಜಮಾಯಿಸಿದೆ. ಭಾರತೀಯ ಸೈನ್ಯ ಕೂಡ ಗಡಿಯಲ್ಲಿ ಜಮಾವಣೆ ಆದ ಬಳಿಕ ಚೀನಾ ತನ್ನ ನಿಲುವನ್ನು ಬದಲಾಯಿಸಿದ್ದು, ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸೋಣ ಎಂಬ ರಾಗ ಎಳೆಯುತ್ತಿದೆ. ಭಾರತಕ್ಕೆ ಹೆದರಿರುವಂತೆ ಕಾಣುತ್ತಿರುವ ಚೀನಾದ ಈ ಬದಲಾವಣೆಯಲ್ಲಿ ರಷ್ಯಾದ ಪಾತ್ರವೂ ಇದೆ ಎಂಬ ಮಾತು ಕೇಳಿ ಬರುತ್ತಿದೆ.
ರಷ್ಯಾದ ಅತಿದೊಡ್ಡ ಮೀಡಿಯಾ ಹೌಸ್ ರಷ್ಯನ್ ಟಿವಿ ಒಂದು ವೇಳೆ ಭಾರತ ಮತ್ತು ಚೀನಾ ನಡುವೆ ಯುದ್ಧ ನಡೆದರೆ, ಅಂತಹ ಪರಿಸ್ಥಿತಿಯಲ್ಲಿ, ರಷ್ಯಾ ಭಾರತದೊಂದಿಗೆ ನಿಲ್ಲುತ್ತದೆ ಎಂದು ಸ್ಪಷ್ಟಪಡಿಸಿದೆ.
ರಷ್ಯನ್ ಟಿವಿ ತನ್ನ ವಿಶೇಷ ಪ್ರಸಾರದಲ್ಲಿ ಚೀನಾ ತಪ್ಪು ಕೆಲಸ ಮಾಡುತ್ತಿದೆ. ಗಡಿಯಲ್ಲಿ ಉದ್ವಿಗ್ನತೆಯನ್ನು ಚೀನಾ ಹೆಚ್ಚಿಸಿದ್ದು , ಕೊರೋನಾದೊಂದಿಗೆ ಜನರು ಹೋರಾಡುತ್ತಿರುವ ಈ ಸಂದರ್ಭದಲ್ಲಿ, ಚೀನಾ ತಪ್ಪನ್ನು ಮಾಡಿದೆ ಎಂದು ಹೇಳಿದೆ. ರಷ್ಯನ್ ಟಿವಿ ಈ ಬಗ್ಗೆ ವಿಶೇಷ ವರದಿ ಪ್ರಸಾರ ಮಾಡಿದ್ದು, ಭಾರತ ಯಾವತ್ತೂ ಸಂವೇದನಾಶೀಲ ದೇಶ. ಅದೆಂದಿಗೂ ತಾನಾಗಿ ಯಾವುದೇ ದೇಶದ ವಿರುದ್ಧ ನಿಲ್ಲುವುದಿಲ್ಲ. ಪ್ರಸ್ತುತ ಲಡಾಖ್ ನ ಗಡಿಯಲ್ಲಿ ಏನು ನಡೆಯುತ್ತಿದೆಯೋ ಅದರಲ್ಲಿ ನಿಸ್ಸಂಶಯವಾಗಿ ಚೀನಾದ ಕೈವಾಡವಿದೆ ಎಂದು ಹೇಳಿದೆ. ಭಾರತ-ಚೀನಾ ಗಡಿ ಉದ್ವಿಗ್ನತೆಗೆ ಚೀನಾವೇ ನೇರ ಕಾರಣವಾಗಿದ್ದು, ಒಂದು ವೇಳೆ ಭಾರತ ಮತ್ತು ಚೀನಾ ದೇಶಗಳ ಮಧ್ಯೆ ಯುದ್ಧ ನಡೆದರೆ ರಷ್ಯಾ ಭಾರತದ ಪರವಾಗಿ ನಿಲ್ಲಲಿದೆ ಎಂದು ರಷ್ಯನ್ ಟಿವಿ ತನ್ನ ಕವರೇಜ್‌ನಲ್ಲಿ ಸ್ಪಷ್ಟಪಡಿಸಿದೆ.

ಭಾರತವು ಮುಂದಿನ ದಿನಗಳಲ್ಲಿ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದನ್ನು ಮುಂದುವರಿಸಲಿದ್ದು, ಚೀನಾವು ರಷ್ಯಾದಿಂದ ಅಷ್ಟೇನೂ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದಿಲ್ಲ. ಹಾಗಾಗಿ ಯುದ್ಧದಂತ ಪರಿಸ್ಥಿತಿ ನಿರ್ಮಾಣವಾದರೆ ರಷ್ಯಾ ಭಾರತಕ್ಕೆ ತನ್ನ ಬೆಂಬಲ ನೀಡಲಿದೆ ಎನ್ನುವುದು ವಿಶ್ಲೇಷಕರ ಮಾತು.








