ಚೀನಾ ಅತಿಕ್ರಮಣ ಮಾಡಿದೆ ಎನ್ನಲು ರಾಹುಲ್ ಗಾಂಧಿ ಅಲ್ಲಿಗೆ ತೆರಳಿದ್ದರೆ – ಸಿದ್ದುಗೆ ನಳಿನ್ ತಿರುಗೇಟು
ಮಂಗಳೂರು, ಜುಲೈ 8: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಟ್ವೀಟ್ ನಲ್ಲಿ ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಈಗ ಬಿಜೆಪಿ ಮುಖಂಡರು ಒಬ್ಬೊಬ್ಬರಾಗಿಯೇ ಟ್ವೀಟ್ ಮೂಲಕವೇ ತರಾಟೆ ತೆಗೆದುಕೊಳ್ಳುತ್ತಿದ್ದಾರೆ.
ಮೊನ್ನೆಯಷ್ಟೆ ಸಚಿವ ಸಿ.ಟಿ. ರವಿ ತಾನು ಕಳ್ಳ ಪರರನ್ನು ನಂಬ ಎಂದು ಸಿದ್ದರಾಮಯ್ಯ ಅವರನ್ನು ಛೇಡಿಸಿದ್ದರೆ, ಇದೀಗ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ನೀವು ಡಿಕೆಶಿಗೆ ನೀಡುತ್ತಿರುವ ಬೆಂಬಲ ಎಂಥದ್ದು? ಕಾಂಗ್ರೆಸ್ ನೊಳಗೆ ನೀವು ನಡೆಸಿದ ರಾಜಕೀಯವೇನು ಕಡಿಮೆಯೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.
ಬಿ.ಎಲ್.ಸಂತೋಷ್ ಅವರಿಗೆ ಸಿದ್ದರಾಮಯ್ಯ ಅವರು ಚೀನಾ ಎರಡು ಕಿಲೋಮೀಟರ್ ಹಿಂದೆ ಸರಿದಿದೆ ಎಂದು ಹೇಳಲು ನೀವೇನು ರಕ್ಷಣಾ ಸಚಿವರೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸಂಸದ ನಳಿನ್ ಕುಮಾರ್ ಚೀನಾ ಸೇನೆ ಒಳಬಂದಿದೆ ಎನ್ನಲು ರಾಹುಲ್ ಗಾಂಧಿ ಅಲ್ಲಿಗೆ ತೆರಳಿದ್ದರೆ ಎಂದು ಪ್ರಶ್ನಿಸಿದ್ದಾರೆ.
ಚೀನಾ ಸೇನೆ ಒಳಬಂದಿದೆ ಎನ್ನಲು ರಾಹುಲ್ ಗಾಂಧಿ ಅಲ್ಲಿಗೆ ತೆರಳಿದ್ದರೆ? ಇಲ್ಲ. ಕೋವಿಡ್ ಬಗ್ಗೆ ಮಾತನಾಡಲು ನಾವು ವೈದ್ಯರೂ ಅಲ್ಲ. ಈ ರೀತಿ ತರ್ಕದಿಂದ ಏನೂ ಉಪಯೋಗವಿಲ್ಲ. ಗಡಿಯಲ್ಲಿ ಸ್ಥಿತಿಯೇನು? ಅದರ ಪ್ರಕ್ರಿಯೆಗಳೇನು ಅರಿಯಿರಿ. ತಂತ್ರಜ್ಞಾನದ ಯುಗದಲ್ಲಿ ಸುಳ್ಳು ಹೇಳಿ ಜನರನ್ನು ನಂಬಿಸಲು ಸಾಧ್ಯವಿಲ್ಲ ಎಂದು ಹೇಳಿರುವ ನಳಿನ್ ಕುಮಾರ್ ನೀವು ಡಿಕೆಶಿಗೆ ನೀಡುತ್ತಿರುವ ಬೆಂಬಲ ಎಂಥದ್ದು? ಕಾಂಗ್ರೆಸ್ ನೊಳಗೆ ನೀವು ನಡೆಸಿದ ರಾಜಕೀಯವೇನು ಕಡಿಮೆಯೆ. ನಿಮ್ಮನ್ನು ಪಕ್ಷಕ್ಕೆ ಕರೆತರಲು ಕಾರಣೀಕತೃರಾದ ಎಚ್. ವಿಶ್ವನಾಥ ಅವರೇ ಪಕ್ಷ ತೊರೆಯುವಂತಾಯಿತಲ್ಲವೆ. ಎಲ್ಲರೂ ನಿಮ್ಮಂತೆ ಎಂದು ಭಾವಿಸಬೇಡಿ. ಬೇರೆಯವರ ಬಾಳೆಯಲ್ಲಿನ ನೊಣ ನೋಡುವುದು ಬಿಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಿಎಂ ಕೇರ್ ಫಂಡ್ ಕುರಿತು ಲೆಕ್ಕ ಕೇಳಿದ ಸಿದ್ದರಾಮಯ್ಯ ಅವರಿಗೆ ಪ್ರತಿಕ್ರಿಯೆ ನೀಡಿರುವ ಸಂಸದರು ಭಾರತೀಯರಿಗೆ ನಮ್ಮ ಪ್ರಧಾನಿ ಬಗ್ಗೆ ಅಪಾರ ನಂಬಿಕೆಯಿದೆ. ಹಾಗಾಗಿಯೆ ಜನ ಅವರ ಬೆಂಬಲಕ್ಕೆ ನಿಂತಿದ್ದಾರೆ. ಪಿಎಂ ಕೇರ್ ಫಂಡ್ ಕುರಿತು ಸೂಕ್ತ ಸಮಯದಲ್ಲಿ ಮಾಹಿತಿ ದೊರೆಯಲಿದೆ. ದುಡ್ಡು ಹಾಕಿದವರಿಗಿಂತ ಬೇರೆಯವರಿಗೆ ಅದರ ಬಗ್ಗೆ ಹೆಚ್ಚು ಕಾಳಜಿ ಇದ್ದಂತಿದೆ ಎಂದು ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.