ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಹಾಗೂ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದ್ದ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಕಡ್ಡಾಯ ಆದೇಶವನ್ನು ರಾಜ್ಯ ಸರ್ಕಾರ ಅಂತಿಮವಾಗಿ ವಾಪಸ್ ಪಡೆದಿದೆ. ಆದರೆ ಸರ್ಕಾರದ ಈ ದಿಢೀರ್ ನಿರ್ಧಾರ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದ್ದು, ಸರ್ಕಾರದ ನಿಯಮಕ್ಕೆ ಬೆಲೆ ಕೊಟ್ಟು ಸಾವಿರಾರು ರೂಪಾಯಿ ಖರ್ಚು ಮಾಡಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದ ಪ್ರಾಮಾಣಿಕ ವಾಹನ ಸವಾರರಿಗೆ ಅಕ್ಷರಶಃ ಉಂಡೆ ನಾಮ ತೀಡಿದಂತಾಗಿದೆ.
ಹಳೆಯ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದ ಸರ್ಕಾರ, ದಂಡದ ಎಚ್ಚರಿಕೆಯನ್ನೂ ನೀಡಿತ್ತು. ಸರ್ಕಾರದ ಆದೇಶಕ್ಕೆ ಬೆಲೆಕೊಟ್ಟು ಹಾಗೂ ದಂಡದ ಭೀತಿಯಿಂದಾಗಿ ಲಕ್ಷಾಂತರ ವಾಹನ ಸವಾರರು ಆನ್ ಲೈನ್ ಮೂಲಕ ಮುಂಚಿತವಾಗಿ ಹಣ ಪಾವತಿಸಿದ್ದರು. ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಆರ್ ಟಿ ಒ ಕಚೇರಿಗಳು ಹಾಗೂ ವಾಹನ ಶೋರೂಂಗಳಲ್ಲಿ ಉದ್ದನೆಯ ಸರತಿಯಲ್ಲಿ ಗಂಟೆಗಟ್ಟಲೆ ಕಾದು ನಿಂತು ನಂಬರ್ ಪ್ಲೇಟ್ ಪಡೆದುಕೊಂಡಿದ್ದರು. ಪರದಾಡಿ ನಿಯಮ ಪಾಲಿಸಿದವರಿಗೆ ಈಗ ಸರ್ಕಾರದ ನಿರ್ಧಾರ ತೀವ್ರ ಆಕ್ರೋಶ ತರಿಸಿದೆ.
ಸರ್ಕಾರ ಈ ಆದೇಶವನ್ನು ಜಾರಿಗೊಳಿಸಿದಾಗಿನಿಂದಲೂ ಸಾರ್ವಜನಿಕರಿಂದ ತೀವ್ರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಬರೋಬ್ಬರಿ ಏಳು ಬಾರಿ ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡಲಾಗಿತ್ತು. ಕಳೆದ ಮೇ ತಿಂಗಳಲ್ಲಿ ಏಳನೇ ಬಾರಿಗೆ ಗಡುವು ವಿಸ್ತರಿಸಿದರೂ, ರಾಜ್ಯದಲ್ಲಿ ಕೇವಲ ಶೇಕಡಾ 29 ರಷ್ಟು ವಾಹನ ಮಾಲೀಕರು ಮಾತ್ರ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದರು. ಶೇಕಡಾ 70 ಕ್ಕೂ ಹೆಚ್ಚು ವಾಹನ ಸವಾರರು ಇದರ ಬಗ್ಗೆ ಕಿಂಚಿತ್ತೂ ಆಸಕ್ತಿ ತೋರಲಿಲ್ಲ. ಅಂತಿಮವಾಗಿ ಜನರ ನಿರಾಸಕ್ತಿ ಹಾಗೂ ವಿರೋಧಕ್ಕೆ ಮಣಿದ ಸರ್ಕಾರ, ಬೇರೆ ದಾರಿ ಕಾಣದೆ ಈಗ ತನ್ನ ಕಡ್ಡಾಯ ಆದೇಶವನ್ನೇ ಹಿಂಪಡೆದಿದೆ.
ಸರ್ಕಾರದ ಈ ನಡೆಗೆ ಇದೀಗ ಸಾರ್ವಜನಿಕ ವಲಯದಲ್ಲಿ ಭಾರಿ ಜನಾಕ್ರೋಶ ವ್ಯಕ್ತವಾಗುತ್ತಿದೆ. ಒಂದೆಡೆ ದಿನಬಳಕೆ ವಸ್ತುಗಳ ಬೆಲೆಯೇರಿಕೆ, ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಇಂತಹ ಆರ್ಥಿಕ ಸಂಕಷ್ಟದ ನಡುವೆಯೂ, ಕಷ್ಟಪಟ್ಟು ಹಣ ಹೊಂದಿಸಿ ಸರ್ಕಾರದ ನಿಯಮ ಪಾಲಿಸಿದ ನಮಗೆ ಸರ್ಕಾರವೇ ಅಧಿಕೃತವಾಗಿ ವಂಚಿಸಿದೆ ಎಂದು ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.
ನಿಯಮ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಸರ್ಕಾರ, ಅವರ ನಿರ್ಲಕ್ಷ್ಯದ ಮುಂದೆ ಮಂಡಿಯೂರಿ ನಿಯಮವನ್ನೇ ರದ್ದು ಮಾಡಿರುವುದು ಎಷ್ಟು ಸರಿ? ಹಾಗಾದರೆ ಸರ್ಕಾರದ ಕಡ್ಡಾಯ ಆದೇಶಗಳಿಗೆ ಬೆಲೆ ಎಲ್ಲಿದೆ? ಪ್ರಾಮಾಣಿಕವಾಗಿ ಹಣ ಪಾವತಿಸಿದವರ ಕಥೆ ಏನು? ನಾವು ಕಟ್ಟಿದ ಹಣವನ್ನು ಸರ್ಕಾರ ಮರುಪಾವತಿ ಮಾಡುತ್ತದೆಯೇ ಎಂಬ ಸಾಲು ಸಾಲು ಪ್ರಶ್ನೆಗಳನ್ನು ಸಾರ್ವಜನಿಕರು ಸರ್ಕಾರದ ಮುಂದಿಡುತ್ತಿದ್ದಾರೆ.
ಯಾವುದೇ ಪೂರ್ವಸಿದ್ಧತೆ ಇಲ್ಲದೆ ಎಚ್ ಎಸ್ ಆರ್ ಪಿ ಆದೇಶ ಜಾರಿಗೆ ತಂದು ರಾಜ್ಯದಲ್ಲಿ ಭಾರೀ ಗೊಂದಲ ಸೃಷ್ಟಿಸಿದ್ದ ಸರ್ಕಾರ, ಈಗ ಅದನ್ನು ದಿಢೀರ್ ವಾಪಸ್ ಪಡೆಯುವ ಮೂಲಕ ಮತ್ತಷ್ಟು ಟೀಕೆಗೆ ಗುರಿಯಾಗಿದೆ. ನಿಯಮ ಪಾಲಿಸಿದ ಪ್ರಾಮಾಣಿಕ ನಾಗರಿಕರಿಗೆ ದ್ರೋಹ ಬಗೆದ ಸರ್ಕಾರದ ನಡೆಯ ವಿರುದ್ಧ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ವಾಹನ ಸವಾರರ ಆಕ್ರೋಶ ಭುಗಿಲೆದ್ದಿದೆ.








