ಪೊಲೀಸರು ಕಾನೂನುಗಳನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸುವಲ್ಲಿ ವಿಫಲರಾದರೆ ಪ್ರಜಾಪ್ರಭುತ್ವ ವಿಫಲವಾಗುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ. ಗುರುಗ್ರಾಮ್ ನಲ್ಲಿ ಯುವ ಪೊಲೀಸ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅಜಿತ್ ದೊವಲ್, ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಕಾನೂನು ರೂಪಿಸಿ, ಅದನ್ನು ಜಾರಿಗೆ ತರುವುದು ಪೊಲೀಸರ ಒಂದು ಪವಿತ್ರವಾದ ಕೆಲಸವಾಗಿದೆ. ಅದನ್ನು ಜಾರಿಗೆ ತರುವಲ್ಲಿ ಪೊಲೀಸರು ವಿಫಲರಾದರೆ ಪ್ರಜಾಪ್ರಭುತ್ವ ವಿಫಲವಾಗುತ್ತದೆ. ಕಾನೂನನ್ನು ತಳಮಟ್ಟದಿಂದ ಜಾರಿಗೆ ತಂದಷ್ಟು ಅದು ಒಳ್ಳೆಯದು ಎಂದು ದೋವಲ್ ಪೊಲೀಸರಿಗೆ ಸಲಹೆ ನೀಡಿದರು.
ಇನ್ನು, ಪೊಲೀಸರು ನ್ಯಾಯಯುತ ಮತ್ತು ವಿಶ್ವಾಸಾರ್ಹರಾಗಿರಬೇಕು ಎಂದು ಹೇಗೆ ನಾವು ನಿರೀಕ್ಷಿಸುತ್ತೇವೋ ಹಾಗೇ ಜನರು ಕೂಡ ಅವರನ್ನು ನ್ಯಾಯಯುತ ಮತ್ತು ವಿಶ್ವಾಸಾರ್ಹತೆಯಿಂದ ನೋಡಬೇಕು ಎಂದ್ರು. ಪೊಲೀಸರು ಮೊದಲು ಸಮಸ್ಯೆಯನ್ನು ಗುರುತಿಸಿ ನಂತರ ಅದರ ಬಗ್ಗೆ ವ್ಯಾಖ್ಯಾನಿಸಬೇಕು. ಸಮಸ್ಯೆಗೆ ಪರಿಹಾರದ ಮಾರ್ಗಗಳನ್ನು ಕಂಡುಕೊಳ್ಳಬೇಕು ಹಾಗೇ ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂದು ಯೋಚಿಸಬೇಕು ಎಂದು ಹೇಳಿದ್ರು.








