ನೀರು ಹಂಚಿಕೆ ವಿಚಾರದಲ್ಲಿ ಸಮಸ್ಯೆಯಾದರೆ ನಾವು ಅನುಮತಿ ಕೊಡುವುದಿಲ್ಲ: ಆರ್ ಅಶೋಕ್ Saaksha Tv
ಬೆಂಗಳೂರು: ನದಿ ಜೋಡಣೆ ವಿಚಾರದಲ್ಲಿ ನಮಗೆ ಅನ್ಯಾಯವಾದರೆ ನಾವು ಒಪ್ಪುವುದಿಲ್ಲ. ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಿನ್ನೆ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಬಜೆಟ್ ನಲ್ಲಿ ಕಾವೇರಿ ಮತ್ತು ಪೆನ್ನಾ ನದಿ ಜೋಡಣೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಆದರೆ ಇದಕ್ಕೆ ರಾಜ್ಯ ಸರ್ಕಾರದ ಅನುಮತಿ ಬೇಕೆಂದು ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಆರ್ ಅಶೋಕ ನೀರು ಹಂಚಿಕೆ ವಿಚಾರದಲ್ಲಿ ಸಮಸ್ಯೆಯಾದರೆ ನಾವು ಅನುಮತಿ ಕೊಡುವುದಿಲ್ಲ. ನಮ್ಮ ರಾಜ್ಯದ ನೀರಿಗೆ ತೊಂದರೆ ಆಗಬಾರದು. ನಮಗೆ ಅನ್ಯಾಯ ಆಗುವ ರೀತಿ ನಾವು ಒಪ್ಪಲ್ಲ ಎಂದು ಸ್ಪಷ್ಟನೆ ನೀಡಿದರು.
ಅಲ್ಲದೇ ಇದೊಂದು ಪ್ರಗತಿಪರ ಬಜೆಟ್. ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬರ್ ಹಾಕಲಾಗುತ್ತಿದೆ. ಡಿಜಿಟಲ್ ಮೂಲಕ ಶಿಕ್ಷಣ ಕೊಡಲು ತೀರ್ಮಾನ ಮಾಡಲಾಗಿದೆ. ಎಸ್ಸಿ, ಎಸ್ಟಿ ರೈತರಿಗೆ ವಿಶೇಷ ಯೋಜನೆ ಘೋಷಣೆ ಮಾಡಿದ್ದಾರೆ. ದೂರದೃಷ್ಟಿ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಹೇಳಿದರು.
ರಾಹುಲ್ ಗಾಂಧಿ ಅವರಿಗೆ ಬಜೆಟ್ನಲ್ಲಿ ಏನಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಬಜೆಟ್ ಮಂಡನೆ ಮುನ್ನವೇ ಇದೊಂದು ನಿರಾಶದಾಯಕ ಬಜೆಟ್ ಅಂತಾ ಹೇಳುತ್ತಿದ್ದರು. ಬಜೆಟ್ ಮಂಡನೆ ಮಾಡಿ ಅವರಿಗೆ ಅನುಭವ ಇಲ್ಲ. ಹೀಗಾಗಿ ಆ ರೀತಿ ಮಾತನಾಡುತ್ತಿದ್ದಾರೆ ಎಂದು ಆರ್.ಅಶೋಕ್ ಟೀಕಿಸಿದರು.









