ವಾಹನ ಸವಾರರೇ ಎಚ್ಚರ. ನೀವೇನಾದರೂ ಹಳೆಯ ವಾಹನಗಳನ್ನು ಹೊಂದಿದ್ದೀರಾ? ಕಚೇರಿಗೆ ಅಲೆದಾಡದೆ, ವಾಹನವನ್ನೂ ತೋರಿಸದೆ ಏಜೆಂಟರಿಗೆ ಹಣ ಕೊಟ್ಟು ಫಿಟ್‌ನೆಸ್ ಸರ್ಟಿಫಿಕೇಟ್ ಮಾಡಿಸಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗೆ ಆಘಾತ ತರುವುದು ಖಂಡಿತ. ಏಕೆಂದರೆ ವಾಹನಗಳ ಫಿಟ್‌ನೆಸ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ತಡೆಯಲು ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ನಿರ್ವಹಣೆ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಗೆ ಶಾಶ್ವತ ಬೀಗ ಜಡಿಯಲು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯವು ಕಠಿಣ ಕ್ರಮಕ್ಕೆ ಮುಂದಾಗಿದೆ.
ನಕಲಿ ಪ್ರಮಾಣಪತ್ರಗಳಿಗೆ ಫುಲ್ ಸ್ಟಾಪ್
ಇದುವರೆಗೂ ವಾಹನಗಳನ್ನು ಪರಿಶೀಲಿಸದೆಯೇ ಕೇವಲ ದಾಖಲೆಗಳ ಆಧಾರದ ಮೇಲೆ ಅಥವಾ ಏಜೆಂಟರ ಪ್ರಭಾವದಿಂದ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ಪಡೆಯುವ ದಂಧೆ ಜೋರಾಗಿತ್ತು. ಆದರೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಹೊರಡಿಸಿರುವ ಹೊಸ ಕರಡು ಅಧಿಸೂಚನೆಯ ಪ್ರಕಾರ, ಈ ನಕಲಿ ಹಾವಳಿಗೆ ಕಡಿವಾಣ ಬೀಳಲಿದೆ. ಇನ್ನು ಮುಂದೆ ಖಾಸಗಿ ವಾಹನಗಳು ಕೂಡ ವಾಣಿಜ್ಯ ವಾಹನಗಳ ಮಾದರಿಯಲ್ಲೇ ಅಧಿಕೃತ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳಲ್ಲಿ (ATS) ಕಡ್ಡಾಯವಾಗಿ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅಂದರೆ, ವಾಹನವನ್ನು ಭೌತಿಕವಾಗಿ ಕೇಂದ್ರಕ್ಕೆ ಕೊಂಡೊಯ್ಯಲೇಬೇಕು, ಇಲ್ಲದಿದ್ದರೆ ಪ್ರಮಾಣಪತ್ರ ಸಿಗುವುದಿಲ್ಲ.
15 ವರ್ಷ ಹಳೆಯ ವಾಹನಗಳಿಗೆ ಅಗ್ನಿಪರೀಕ್ಷೆ
ಹೊಸ ನಿಯಮಗಳ ಅನ್ವಯ, 15 ವರ್ಷಕ್ಕಿಂತ ಹಳೆಯದಾದ ವಾಹನಗಳ ನೋಂದಣಿ ನವೀಕರಣಕ್ಕೆ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವುದು ಅನಿವಾರ್ಯವಾಗಿದೆ. ದೇಶಾದ್ಯಂತ ಈಗಾಗಲೇ 160ಕ್ಕೂ ಹೆಚ್ಚು ಇಂತಹ ಹೈಟೆಕ್ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಮನುಷ್ಯರ ಹಸ್ತಕ್ಷೇಪವಿಲ್ಲದೆ, ಅತ್ಯಾಧುನಿಕ ಗಣಕೀಕೃತ ಯಂತ್ರಗಳೇ ವಾಹನದ ಫಿಟ್‌ನೆಸ್ ಮತ್ತು ಮಾಲಿನ್ಯ ಹೊರಸೂಸುವಿಕೆಯ ಮಟ್ಟವನ್ನು ಪರಿಶೀಲಿಸುತ್ತವೆ. 15 ವರ್ಷ ಮೇಲ್ಪಟ್ಟ ವಾಹನಗಳಿಗೆ ಪ್ರತಿ ಐದು ವರ್ಷಗಳಿಗೊಮ್ಮೆ ಈ ಪರೀಕ್ಷೆ ಕಡ್ಡಾಯವಾಗಿದ್ದು, ವಾಹನ ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಸರ್ಟಿಫಿಕೇಟ್ ಸಿಗುವುದಿಲ್ಲ.
ಬಂತು 10 ಸೆಕೆಂಡ್ ವಿಡಿಯೋ ಸಾಕ್ಷ್ಯದ ರೂಲ್ಸ್
ಇಡೀ ಪ್ರಕ್ರಿಯೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ಅತ್ಯಂತ ಮಹತ್ವದ ಬದಲಾವಣೆ ಎಂದರೆ ವೀಡಿಯೊ ಸಾಕ್ಷ್ಯ. ವಾಹನವು ನಿಜವಾಗಿಯೂ ಪರೀಕ್ಷಾ ಕೇಂದ್ರಕ್ಕೆ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೊಸ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಫಿಟ್‌ನೆಸ್ ಪ್ರಮಾಣಪತ್ರ ನೀಡುವ ಮೊದಲು, ಸಂಬಂಧಪಟ್ಟ ಅಧಿಕಾರಿ ಅಥವಾ ಪರೀಕ್ಷಾ ಕೇಂದ್ರವು ವಾಹನದ ಕನಿಷ್ಠ 10 ಸೆಕೆಂಡುಗಳ ವೀಡಿಯೊವನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ಇದು ಸಾಮಾನ್ಯ ವೀಡಿಯೊ ಆಗಿರದೆ, ಜಿಯೋ ಟ್ಯಾಗ್ ಮಾಡಲಾದ ಅಂದರೆ ಸ್ಥಳ ಮತ್ತು ಸಮಯವನ್ನು ನಮೂದಿಸುವ ವೀಡಿಯೊ ಆಗಿರಬೇಕು. ಈ ವೀಡಿಯೊದಲ್ಲಿ ವಾಹನದ ಮುಂಭಾಗ, ಹಿಂಭಾಗ, ಎಡ ಮತ್ತು ಬಲ ಬದಿಗಳು (360 ಡಿಗ್ರಿ) ಸಂಪೂರ್ಣವಾಗಿ ಕಾಣಬೇಕು. ಜೊತೆಗೆ ವಾಹನದ ನಂಬರ್ ಪ್ಲೇಟ್, ಚಾಸಿಸ್ ಸಂಖ್ಯೆ ಮತ್ತು ಎಂಜಿನ್ ಸಂಖ್ಯೆ ಸ್ಪಷ್ಟವಾಗಿ ಗೋಚರಿಸಬೇಕು. ಈ ನಿಯಮದಿಂದಾಗಿ ವಾಹನವನ್ನು ಹಾಜರುಪಡಿಸದೆ ಪ್ರಮಾಣಪತ್ರ ಪಡೆಯುವ ಹಳೆಯ ಚಾಳಿಗೆ ಬ್ರೇಕ್ ಬೀಳಲಿದೆ.
ಫೇಲ್ ಆದರೆ ಗುಜರಿ ಸೇರುವುದು ಖಚಿತ
ಒಂದು ವೇಳೆ ನಿಮ್ಮ ವಾಹನವು ಈ ಕಠಿಣ ಫಿಟ್‌ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣವಾದರೆ ಮುಂದೇನು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇದಕ್ಕೂ ಸರ್ಕಾರ ಸ್ಪಷ್ಟ ಉತ್ತರ ನೀಡಿದೆ. ಪರೀಕ್ಷೆಯಲ್ಲಿ ವಿಫಲವಾದ ದಿನಾಂಕದಿಂದ, ವಾಹನವನ್ನು ದುರಸ್ತಿಪಡಿಸಿ ಮತ್ತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೇವಲ 180 ದಿನಗಳ (6 ತಿಂಗಳು) ಗಡುವು ನೀಡಲಾಗುತ್ತದೆ.
ಈ ಆರು ತಿಂಗಳ ಅವಧಿಯೊಳಗೆ ವಾಹನ ದುರಸ್ತಿಗೊಂಡು ಪ್ರಮಾಣಪತ್ರ ಪಡೆಯದಿದ್ದರೆ, ಆ ವಾಹನವನ್ನು ಅಧಿಕೃತವಾಗಿ ಎಂಡ್ ಆಫ್ ಲೈಫ್ ವೆಹಿಕಲ್ (ELV) ಎಂದು ಘೋಷಿಸಲಾಗುತ್ತದೆ. ತಕ್ಷಣವೇ ರಾಷ್ಟ್ರೀಯ ವಾಹನ್ ಡೇಟಾಬೇಸ್‌ನಲ್ಲಿ ಈ ವಾಹನವನ್ನು ಗುಜರಿಗೆ ಹಾಕಲು ಯೋಗ್ಯ ಎಂದು ನಮೂದಿಸಲಾಗುತ್ತದೆ. ಇದರರ್ಥ ಆ ವಾಹನವು ಇನ್ನು ಮುಂದೆ ರಸ್ತೆಯಲ್ಲಿ ಓಡಾಡಲು ಅರ್ಹವಾಗಿರುವುದಿಲ್ಲ ಮತ್ತು ಅದನ್ನು ಕಡ್ಡಾಯವಾಗಿ ಸ್ಕ್ರ್ಯಾಪ್ ಮಾಡಬೇಕಾಗುತ್ತದೆ.
ಯಾವುದೇ ವಿನಾಯಿತಿ ಇಲ್ಲ
ಹಿಂದಿನ ನಿಯಮಗಳಲ್ಲಿ ಶುಲ್ಕ ಪಾವತಿಸಿ ಅವಧಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವಿತ್ತು. ಆದರೆ ಹೊಸ ನಿಯಮಗಳಲ್ಲಿ ಅಂತಹ ಯಾವುದೇ ಲೋಪದೋಷಗಳಿಗೆ ಜಾಗವಿಲ್ಲ. ಅವಧಿ ವಿಸ್ತರಣೆಯ ಆಯ್ಕೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ವಾಹನವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಅಥವಾ ಗುಜರಿಗೆ ಹಾಕುವುದು ಎರಡೇ ಆಯ್ಕೆಗಳು ಸವಾರರ ಮುಂದಿವೆ.
ಒಟ್ಟಾರೆಯಾಗಿ, ರಸ್ತೆ ಸುರಕ್ಷತೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಆದ್ದರಿಂದ ವಾಹನ ಮಾಲೀಕರು ಇಂದೇ ಎಚ್ಚೆತ್ತುಕೊಂಡು ತಮ್ಮ ವಾಹನಗಳ ದಾಖಲೆ ಮತ್ತು ಕಂಡೀಷನ್ ಬಗ್ಗೆ ಗಮನಹರಿಸುವುದು ಉತ್ತಮ.








