ನೀವು ಇನ್ನೂ ರೇಷನ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡಿಲ್ಲವಾದರೆ ಈ ಮಾಹಿತಿಯನ್ನು ಒಮ್ಮೆ ನೋಡಿ
ಹೊಸದಿಲ್ಲಿ, ಜೂನ್ 19: ನೀವು ಇನ್ನೂ ಕೂಡ ನಿಮ್ಮ ರೇಷನ್ ಕಾರ್ಡ್ ಅನ್ನು ಆಧಾರ್ ಗೆ ಲಿಂಕ್ ಮಾಡಿಲ್ಲದಿದ್ದರೆ, ಇಂದೇ ಆ ಕೆಲಸ ಪೂರ್ಣಗೊಳಿಸಿ. ಸೆಪ್ಟೆಂಬರ್ 30 ರ ಬಳಿಕವೂ ನೀವು ನಿಮ್ಮ ಪಡಿತರ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡದಿದ್ದರೆ ಮುಂದೆ ಪಡಿತರವನ್ನು ಪಡೆಯುವಾಗ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ರೇಷನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಲು ಕೇಂದ್ರ ಸರ್ಕಾರವು ಅಂತಿಮ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಿದೆ. ತಮ್ಮ ಪಡಿತರ ಚೀಟಿಯನ್ನು ಸೆಪ್ಟೆಂಬರ್ 30 ರೊಳಗೆ ಆಧಾರ್ ಗೆ ಲಿಂಕ್ ಮಾಡದಿದ್ದ ಪಕ್ಷದಲ್ಲಿ ಪಡಿತರ ನೀಡಲಾಗುವುದಿಲ್ಲ ಎಂದು ಈಗಾಗಲೇ ಕೇಂದ್ರ ಆಹಾರ ಸಚಿವಾಲಯ ನಿರ್ದೇಶಿಸಿದೆ.
ಈಗ ನೀವು ಪಡಿತರ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಯಾವುದೇ ಕಛೇರಿ ಅಲೆಯಬೇಕಿಲ್ಲ. ಮನೆಯಲ್ಲೇ ಕೂತು ಪಡಿತರ ಚೀಟಿಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು.

ಮನೆಯಿಂದಲೇ ಹೇಗೆ ಪಡಿತರ ಕಾರ್ಡ್ ಅನ್ನು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಎಂದು ಕೆಳಗೆ ವಿವರಿಸಲಾಗಿದೆ.
1. ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) uidai.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಬಳಿಕ ‘ಸ್ಟಾರ್ಟ್ ನೌ’ (Start Now) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
3. ನಿಮ್ಮ ವಿಳಾಸ ವಿವರಗಳನ್ನು ಭರ್ತಿ ಮಾಡಿ.
4. – ಜಿಲ್ಲೆ ಮತ್ತು ರಾಜ್ಯ- ಲಭ್ಯವಿರುವ ಆಯ್ಕೆಗಳಿಂದ ‘ರೇಷನ್ ಕಾರ್ಡ್’ ಪ್ರಯೋಜನ ಪ್ರಕಾರವನ್ನು ಆಯ್ಕೆಮಾಡಿ.
5. ‘ರೇಷನ್ ಕಾರ್ಡ್’ ಯೋಜನೆಯನ್ನು ಆಯ್ಕೆಮಾಡಿ.
6. ನಿಮ್ಮ ಪಡಿತರ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ, ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
7. ಈಗ ನಿಮ್ಮ ನೋಂದಾಯಿತ ಮೊಬೈಲ್ ಗೆ ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ಕಳುಹಿಸಲಾಗುತ್ತದೆ.
8. ಒಟಿಪಿ ಭರ್ತಿ ಮಾಡಿ. ಪ್ರಕ್ರಿಯೆಯ ಪೂರ್ಣಗೊಳಿಸುವಿಕೆಯ ಅಧಿಸೂಚನೆಯನ್ನು ಪರದೆಯ ಮೇಲೆ ನೋಡಲಾಗುತ್ತದೆ.
9. ಈಗ ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ ಮತ್ತು ಯಶಸ್ವಿ ಪರಿಶೀಲನೆಯ ಬಳಿಕ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡಲಾಗುತ್ತದೆ.

ಈಗಾಗಲೇ ಜೂನ್ 1 ರಿಂದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು 20 ರಾಜ್ಯಗಳಲ್ಲಿ ‘ಒನ್ ನೇಷನ್-ಒನ್ ರೇಷನ್ ಕಾರ್ಡ್’ ಯೋಜನೆ ಆರಂಭಿಸಲಾಗಿದ್ದು, ಈ ಯೋಜನೆಯಡಿಯಲ್ಲಿ ಯಾವುದೇ ರಾಜ್ಯದ ಪಡಿತರ ಚೀಟಿ ಹೊಂದಿದ್ದರೂ ಯಾವುದೇ ರಾಜ್ಯದಲ್ಲಿ ಪಡಿತರವನ್ನು ಖರೀದಿಸಬಹುದಾಗಿದೆ.
‘ಒನ್ ನೇಷನ್-ಒನ್ ರೇಷನ್ ಕಾರ್ಡ್’ ಯೋಜನೆಯನ್ನು ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಗೋವಾ, ಜಾರ್ಖಂಡ್, ತ್ರಿಪುರ, ಬಿಹಾರ, ಉತ್ತರ ಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ದಮನ್-ಡಿಯುಗಳಲ್ಲಿ ಈಗಾಗಲೇ ಜಾರಿಗೆ ತರಲಾಗಿದೆ. ಕೇಂದ್ರ ಸಚಿವಾಲಯದ ಪ್ರಕಾರ ಇದುವರೆಗಿನ ಒಟ್ಟು 23.5 ಕೋಟಿ ಪಡಿತರ ಚೀಟಿಗಳಲ್ಲಿ 90 ಪ್ರತಿಶತ ಪಡಿತರ ಚೀಟಿಗಳು ಆಧಾರ್ ಗೆ ಲಿಂಕ್ ಮಾಡಲಾಗಿದೆ.








