ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಜೈನ್ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಗೆ ಕರ್ನಾಟಕ ಹೈಕೋರ್ಟ್ ಭಾರಿ ಆಘಾತ ನೀಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವಿಧಿಸಿದ್ದ ಬರೋಬ್ಬರಿ 12 ಕೋಟಿ ರೂಪಾಯಿಗಳ ಪ್ರೊ-ರೇಟಾ ಶುಲ್ಕವನ್ನು ಪ್ರಶ್ನಿಸಿ ಶಾಲಾ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಈ ಮೂಲಕ ಜಲಮಂಡಳಿಯ ನೋಟಿಸ್ ಅನ್ನು ಎತ್ತಿಹಿಡಿದಿರುವ ನ್ಯಾಯಾಲಯವು, ನಿಯಮದನ್ವಯ ಶುಲ್ಕ ಪಾವತಿಸುವುದು ಅನಿವಾರ್ಯ ಎಂದು ಸ್ಪಷ್ಟಪಡಿಸಿದೆ.
ಶಾಲಾ ಆಡಳಿತ ಮಂಡಳಿಯ ವಾದಗಳನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು, ಬೃಹತ್ ಮೊತ್ತದ ಶುಲ್ಕ ಪಾವತಿಗೆ ಆದೇಶಿಸಿದೆ. ಈ ತೀರ್ಪು ಬಾಕಿ ಉಳಿದಿರುವ ನೀರಿನ ಶುಲ್ಕ ವಸೂಲಾತಿಗೆ ಜಲಮಂಡಳಿಗೆ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ.
ಕನಕಪುರ ರಸ್ತೆಯಲ್ಲಿರುವ ಜೈನ್ ಇಂಟರ್ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯ ಆವರಣದಲ್ಲಿ ಅಂತರ್ಜಲ ಮಟ್ಟ ಕುಸಿದು, ಕೊಳವೆ ಬಾವಿಯ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಹಿತದೃಷ್ಟಿಯಿಂದ ಕಾವೇರಿ ನೀರಿಗಾಗಿ ಶಾಲೆಯು ಜಲಮಂಡಳಿಯ ಮೊರೆ ಹೋಗಿತ್ತು. ದಿನಕ್ಕೆ ಬರೋಬ್ಬರಿ 9 ಲಕ್ಷ ಲೀಟರ್ ನೀರು ಪೂರೈಸುವಂತೆ 2004 ರಲ್ಲೇ ಶಾಲಾ ಆಡಳಿತ ಮಂಡಳಿ ಜಲಮಂಡಳಿಗೆ ಮನವಿ ಸಲ್ಲಿಸಿತ್ತು.
ಅಂದಿನ ಒಪ್ಪಂದದಂತೆ, ನೀರು ಸರಬರಾಜು ಪೈಪ್ಲೈನ್ ಅಳವಡಿಸಲು ತಗಲುವ ವೆಚ್ಚವಾದ 93 ಲಕ್ಷ ರೂಪಾಯಿಗಳನ್ನು ಶಾಲೆ ಪಾವತಿಸಿತ್ತು. ಆದರೆ, ಕಾಲಕ್ರಮೇಣ ನೀರಿನ ದರ ಮತ್ತು ಸಂಪರ್ಕದ ನಿಯಮಗಳಲ್ಲಿ ಬದಲಾವಣೆಯಾಯಿತು. 2016 ರಲ್ಲಿ ಜಲಮಂಡಳಿಯು ತನ್ನ ದರಗಳನ್ನು ಪರಿಷ್ಕರಿಸಿದಾಗ, ಶಾಲೆಗೆ ಅನ್ವಯವಾಗುವಂತೆ ಪ್ರೊ-ರೇಟಾ ಶುಲ್ಕವನ್ನು ಮರು ಲೆಕ್ಕಾಚಾರ ಹಾಕಲಾಯಿತು. ಇದರನ್ವಯ 4.32 ಕೋಟಿ ರೂ. ಮೂಲ ಪ್ರೊ-ರೇಟಾ ಶುಲ್ಕ ಹಾಗೂ ಅದಕ್ಕೆ ಬಡ್ಡಿ ಮತ್ತು ಇತರೆ ದಂಡ ಸೇರಿ ಒಟ್ಟು 12.96 ಕೋಟಿ ರೂ. ಪಾವತಿಸುವಂತೆ ಜಲಮಂಡಳಿ ಡಿಮ್ಯಾಂಡ್ ನೋಟಿಸ್ ನೀಡಿತ್ತು. ಹಣ ಪಾವತಿಸದಿದ್ದರೆ ನೀರು ಮತ್ತು ಒಳಚರಂಡಿ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು.
ಹೈಕೋರ್ಟ್ ಮೆಟ್ಟಿಲೇರಿದ್ದ ಶಾಲೆ
ಜಲಮಂಡಳಿಯ ಈ ನಡೆಯನ್ನು ಪ್ರಶ್ನಿಸಿ ಶಾಲೆ ಹೈಕೋರ್ಟ್ ಮೊರೆ ಹೋಗಿತ್ತು. ನಾವು ಶೈಕ್ಷಣಿಕ ಸಂಸ್ಥೆಯಾಗಿದ್ದು, ಲಾಭದಾಯಕ ಉದ್ದೇಶ ಹೊಂದಿಲ್ಲ. ನಮ್ಮನ್ನು ವಾಣಿಜ್ಯ ವಿಭಾಗದಡಿ ಪರಿಗಣಿಸಿ ಇಷ್ಟೊಂದು ಬೃಹತ್ ಮೊತ್ತದ ಶುಲ್ಕ ವಿಧಿಸುವುದು ಸರಿಯಲ್ಲ. ಅಲ್ಲದೆ, ಈಗಾಗಲೇ ಒಪ್ಪಂದದಂತೆ ನಾವು ಹಣ ಪಾವತಿಸಿದ್ದೇವೆ ಎಂದು ಶಾಲೆಯ ಪರ ವಕೀಲರು ವಾದ ಮಂಡಿಸಿದ್ದರು. ಅಷ್ಟೇ ಅಲ್ಲದೆ, ಈ ಹಿಂದೆ ಹೆಚ್ಚುವರಿಯಾಗಿ ಪಾವತಿಸಿದ್ದೇವೆ ಎನ್ನಲಾದ 1.01 ಕೋಟಿ ರೂ.ಗಳನ್ನು ಜಲಮಂಡಳಿ ವಾಪಸ್ ನೀಡಬೇಕೆಂದು ಕೋರಿದ್ದರು.
ಶಾಲೆಯ ವಾದ ತಳ್ಳಿಹಾಕಿದ ನ್ಯಾಯಾಲಯ
ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಜಲಮಂಡಳಿಯ ಪರವಾಗಿ ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯವು ತನ್ನ ಆದೇಶದಲ್ಲಿ ಪ್ರಮುಖವಾಗಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದೆ:
1. ಜಲಮಂಡಳಿಗೆ ಸಂಪೂರ್ಣ ಅಧಿಕಾರವಿದೆ: ಬಿಡಬ್ಲ್ಯುಎಸ್ಎಸ್ಬಿ ಕಾಯ್ದೆಯ ಸೆಕ್ಷನ್ 16 ರ ಅಡಿಯಲ್ಲಿ ನೀರಿನ ಸಂಪರ್ಕಕ್ಕೆ ಸಂಬಂಧಿಸಿದಂತೆ ಪ್ರೊ-ರೇಟಾ ಶುಲ್ಕ ವಿಧಿಸಲು ಮತ್ತು ಅದನ್ನು ಪರಿಷ್ಕರಿಸಲು ಮಂಡಳಿಗೆ ಶಾಸನಬದ್ಧ ಅಧಿಕಾರವಿದೆ. ಹಳೆಯ ಒಪ್ಪಂದಗಳು ಶಾಸನಬದ್ಧ ನಿಯಮಗಳನ್ನು ಮೀರುವಂತಿಲ್ಲ.
2. ವಾಣಿಜ್ಯ vs ವಸತಿ: ನೀರಿನ ದರ ನಿಗದಿಯಲ್ಲಿ ಜಲಮಂಡಳಿ ಕೇವಲ ಎರಡು ವಿಭಾಗಗಳನ್ನು ಮಾತ್ರ ಹೊಂದಿದೆ. ಒಂದು ವಸತಿ (Domestic) ಮತ್ತು ಇನ್ನೊಂದು ವಸತಿಯೇತರ (Non-Domestic). ಶೈಕ್ಷಣಿಕ ಸಂಸ್ಥೆಗಳಿಗೆ ಎಂದು ಪ್ರತ್ಯೇಕ ವಿನಾಯಿತಿ ಅಥವಾ ವಿಭಾಗ ಕಾಯ್ದೆಯಲ್ಲಿಲ್ಲ. ಹೀಗಾಗಿ ಶಾಲೆಯನ್ನು ವಸತಿಯೇತರ ವಿಭಾಗದಡಿಯೇ ಪರಿಗಣಿಸಬೇಕಾಗುತ್ತದೆ.
3. ದಾಖಲೆಗಳಲ್ಲಿ ವಾಣಿಜ್ಯ ಸಂಕೀರ್ಣ ಎಂದು ಉಲ್ಲೇಖ: ಸ್ವತಃ ಅರ್ಜಿದಾರರೇ (ಶಾಲೆ) ಈ ಹಿಂದೆ ಸಲ್ಲಿಸಿದ ನಕ್ಷೆ ಮಂಜೂರಾತಿ ಮತ್ತು ಇತರೆ ದಾಖಲೆಗಳಲ್ಲಿ ತಮ್ಮ ಕಟ್ಟಡವನ್ನು ವಾಣಿಜ್ಯ ಸಂಕೀರ್ಣ ಎಂದು ಘೋಷಿಸಿಕೊಂಡಿದ್ದಾರೆ. ಹೀಗಿರುವಾಗ ಈಗ ಶೈಕ್ಷಣಿಕ ಸಂಸ್ಥೆ ಎಂದು ವಾದಿಸಿ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಚಾಟಿ ಬೀಸಿದೆ.
ತೀರ್ಪಿನ ಪರಿಣಾಮವೇನು
ನ್ಯಾಯಾಲಯವು ಶಾಲೆಯ ರಿಟ್ ಅರ್ಜಿಯನ್ನು ವಜಾಗೊಳಿಸಿದ್ದು, 1.01 ಕೋಟಿ ರೂ. ಮರುಪಾವತಿ ಬೇಡಿಕೆಯನ್ನೂ ತಿರಸ್ಕರಿಸಿದೆ. ಆದರೆ, ವಿಧಿಸಲಾಗಿರುವ ಶುಲ್ಕದ ಲೆಕ್ಕಾಚಾರದಲ್ಲಿ ಏನಾದರೂ ಗಣಿತದ ತಪ್ಪುಗಳಿದ್ದರೆ (Arithmetical Errors), ಅದನ್ನು ಸರಿಪಡಿಸಿಕೊಳ್ಳಲು ಮೇಲ್ಮನವಿ ಪ್ರಾಧಿಕಾರಕ್ಕೆ ಹೋಗಲು ಶಾಲೆಗೆ ಅವಕಾಶ ನೀಡಿದೆ.
ಈ ತೀರ್ಪು ಬೆಂಗಳೂರಿನ ಇತರೆ ಬೃಹತ್ ಶಿಕ್ಷಣ ಸಂಸ್ಥೆಗಳು, ಅಪಾರ್ಟ್ಮೆಂಟ್ಗಳು ಮತ್ತು ವಾಣಿಜ್ಯ ಕಟ್ಟಡಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಪ್ರೊ-ರೇಟಾ ಶುಲ್ಕವನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸುತ್ತಿರುವ ಇತರೆ ಸಂಸ್ಥೆಗಳಿಗೂ ಈ ತೀರ್ಪು ಹಿನ್ನಡೆಯುಂಟುಮಾಡುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಎಷ್ಟೇ ದೊಡ್ಡ ಸಂಸ್ಥೆಯಾದರೂ ಜಲಮಂಡಳಿಯ ನಿಯಮಗಳಿಗೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೈಕೋರ್ಟ್ ಈ ತೀರ್ಪಿನ ಮೂಲಕ ರವಾನಿಸಿದೆ.








