ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುತ್ತಿದ್ದು, ಬಿಜೆಪಿ ಮೂಲ-ವಲಸೆ ಶಾಸಕರ ನಡುವಿನ ವಾಕ್ಸಮರ, ಏಟು-ಎದಿರೇಟು ತೀವ್ರ ಸ್ವರೂಪ ಪಡೆದಿದೆ.
ಸೋತವರ ಪರ ಲಾಬಿ ಮಾಡೋವರು ತಮ್ಮ ಸಚಿವ ಸ್ಥಾನವನ್ನೇ ತ್ಯಾಗ ಮಾಡಲಿ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಹೊನ್ನಾಳಿ ಶಾಸಕ ಶಾಸಕ ಎಂ.ಪಿ ರೇಣುಕಾಚಾರ್ಯ ಟಾಂಗ್ ನೀಡಿದ್ದರು. ಅಸೆಂಬ್ಲಿ ಚುನಾವಣೆಯಲ್ಲಿ ಸೋತು, ಎಂಎಲ್ಸಿಯಾಗಿ ಆಯ್ಕೆಯಾಗಿರುವ ಸಿ.ಪಿ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹೈಕಮಾಂಡ್ ಮಟ್ಟದಲ್ಲಿ ರಮೇಶ್ ಜಾರಕಿಹೊಳಿ ತೀವ್ರ ಲಾಬಿ ನಡೆಸುತ್ತಿದ್ದಾರೆ ಎಂಬುದು ರೇಣುಕಾಚಾರ್ಯ ಕೋಪಕ್ಕೆ ಕಾರಣವಾಗಿದೆ.
ರೇಣುಕಾಚಾರ್ಯ ಅವರ ಹೇಳಿಕೆಗೆ ಕೂಲ್ ಆಗಿಯೇ ಬೆಳಗಾವಿಯಲ್ಲಿ ತಿರುಗೇಟು ನೀಡಿರುವ ಸಚಿವ ರಮೇಶ್ ಜಾರಕಿಹೊಳಿ, ಸಮಯ ಬರಲಿ, ನಾನು ರಾಜೀನಾಮೆ ನೀಡುತ್ತೇನೆ. ಸಚಿವ ಸ್ಥಾನ ತ್ಯಾಗ ಮಾಡೋದು ಆದರೇ ಮಾಡೋಣ, ಅದರಲ್ಲಿ ಏನು. ನನಗೆ ಯಾಕೆ, ಬೇರೆ ಅರ್ಥದಲ್ಲಿ ಮಾತನಾಡಿರಬಹುದು. ರೇಣುಕಾಚಾರ್ಯ ಆಗ್ರಹ ಸರಿಯಾಗಿದೆ ಎಂದಿದ್ದಾರೆ.
ಸಿ.ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ಸಿಗಬೇಕು. ತ್ಯಾಗ ಮಾಡಿದ 17 ಶಾಸಕರಿಗೂ ಸಂಪುಟದಲ್ಲಿ ಅವಕಾಶ ಸಿಗಬೇಕು. ಶ್ರೀಮಂತ ಪಾಟೀಲ್ ಅವರನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆ ಇಲ್ಲ ಎಂದಿರುವ ರಮೇಶ್ ಜಾರಕಿಹೊಳಿ, ಶೀಘ್ರದಲ್ಲೇ ಸಂಪುಟ ವಿಸ್ತರಣೆ ಆಗಬೇಕು ಎನ್ನುವುದು ನಮ್ಮ ಬೇಡಿಕೆ. ಆದರೆ ದುರ್ದೈವದಿಂದ ಮುಂದಕ್ಕೆ ಹೋಗುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಒಂದು ತಿಂಗಳು ಮುಂದುಡಿಕೆಯಾಗಲಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ತಮ್ಮನ್ನು ಬಿಟ್ಟು ಸಭೆ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಆರ್. ಶಂಕರ್, ವಿಶ್ವನಾಥ್, ಎಂಟಿಬಿ ನಾಗರಾಜ್ ಸಭೆ ಮಾಡಿದ್ದಾರೆ. ಸಹಜವಾಗಿ ಬೇಡಿಕೆ ಇಡೋದು ಸಹಜ. ನಾನು ಯೋಗೇಶ್ವರ್ ಅಷ್ಟೇ ಅಲ್ಲ ಎಲ್ಲರ ಪರ ಲಾಭಿ ಮಾಡುತ್ತೇನೆ. ಸಿಎಂ ಬಿ.ಎಸ್ ಯಡಿಯೂರಪ್ಪ ಅವಧಿ ಪೂರ್ಣ ಮಾಡ್ತಾರೆ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel