ಮಂಗಳೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ 20 ದಿನಗಳಿಂದ ತಲೆಮರೆಸಿಕೊಂಡಿರುವ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಭಾರೀ ಹಿನ್ನಡೆಯಾಗಿದೆ. ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದ್ದು, ಬಂಧನದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಬೆಳ್ತಂಗಡಿಯ ಕಚೇರಿಯೊಂದರಲ್ಲಿ ಮಾರಕಾಸ್ತ್ರಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪೊಲೀಸರು ದಾಳಿ ನಡೆಸಿ ಎರಡು ತಲವಾರುಗಳು ಹಾಗೂ ಒಂದು ಬಂದೂಕನ್ನು ವಶಪಡಿಸಿಕೊಂಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ತಿಮರೋಡಿ ತಲೆಮರೆಸಿಕೊಂಡಿದ್ದು, ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಸರ್ಕಾರದ ಪರವಾಗಿ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ಪ್ರಕರಣದ ಗಂಭೀರತೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು. “ಆರೋಪಿಯು ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದು, ಅವರಿಗೆ ಜಾಮೀನು ನೀಡಿದರೆ ಸಾಕ್ಷ್ಯನಾಶ ಮಾಡುವ ಮತ್ತು ತನಿಖೆಯ ಮೇಲೆ ಪ್ರಭಾವ ಬೀರುವ ಎಲ್ಲ ಸಾಧ್ಯತೆಗಳಿವೆ. ಅಲ್ಲದೆ, ಪ್ರಕರಣ ದಾಖಲಾದ ದಿನದಿಂದಲೂ ಅವರು ತಲೆಮರೆಸಿಕೊಂಡಿರುವುದು ತನಿಖೆಗೆ ಸಹಕರಿಸದಿರುವ ಅವರ ಮನಸ್ಥಿತಿಯನ್ನು ತೋರಿಸುತ್ತದೆ,” ಎಂದು ಬಲವಾಗಿ ವಾದಿಸಿದರು. ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಸಾರ್ವಜನಿಕ ಶಾಂತಿಗೆ ಅಪಾಯವನ್ನುಂಟು ಮಾಡುವಂತಹವಾಗಿದ್ದು, ಜಾಮೀನು ನೀಡುವುದು ಸರಿಯಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.
ತಿಮರೋಡಿ ಪರ ವಕೀಲರ ಪ್ರಬಲ ವಾದ
ತಿಮರೋಡಿ ಪರ ಹಿರಿಯ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಅವರು, ಪೊಲೀಸರು ದಾಖಲಿಸಿರುವ ಪ್ರಕರಣವೇ ಕಾನೂನುಬಾಹಿರ ಎಂದು ವಾದಿಸಿದರು. “ಪೊಲೀಸರು ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ಐಆರ್) ವಶಪಡಿಸಿಕೊಂಡ ವಸ್ತುಗಳ ಬಗ್ಗೆ ಯಾವುದೇ ಸ್ಪಷ್ಟ ತಾಂತ್ರಿಕ ವಿವರಗಳನ್ನು ನೀಡಿಲ್ಲ. ತಲವಾರುಗಳ ಉದ್ದ, ಅಗಲ ಎಷ್ಟು? ಅವು ಅಲಂಕಾರಿಕ ವಸ್ತುಗಳೇ ಅಥವಾ ನಿಜವಾದ ಆಯುಧಗಳೇ ಎಂಬ ಬಗ್ಗೆ ಉಲ್ಲೇಖವಿಲ್ಲ. ಹಾಗೆಯೇ, ವಶಪಡಿಸಿಕೊಂಡ ಬಂದೂಕು ಪರವಾನಗಿ ಅಗತ್ಯವಿರುವ ಶಸ್ತ್ರಾಸ್ತ್ರವೇ ಅಥವಾ ಸಾಮಾನ್ಯ ಏರ್ಗನ್ ಎಂಬುದನ್ನು ಖಚಿತಪಡಿಸಿಲ್ಲ. ಈ ರೀತಿಯ ಅಸ್ಪಷ್ಟ ಮಾಹಿತಿಯ ಆಧಾರದ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಂತಹ ಗಂಭೀರ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ” ಎಂದು ಪ್ರತಿವಾದ ಮಂಡಿಸಿದರು.
ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಕೂಲಂಕಷವಾಗಿ ಆಲಿಸಿದ ನ್ಯಾಯಾಧೀಶರು, ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದರು. ಈ ತೀರ್ಪಿನಿಂದಾಗಿ ತಿಮರೋಡಿ ಅವರಿಗೆ ಬಂಧನ ಭೀತಿ ಮತ್ತಷ್ಟು ಹೆಚ್ಚಾಗಿದ್ದು, ಪೊಲೀಸರು ಅವರನ್ನು ಯಾವುದೇ ಕ್ಷಣದಲ್ಲಿ ಬಂಧಿಸುವ ಅಧಿಕಾರವನ್ನು ಪಡೆದಿದ್ದಾರೆ.
ಜಿಲ್ಲಾ ನ್ಯಾಯಾಲಯದಲ್ಲಿ ಹಿನ್ನಡೆಯಾಗಿರುವ ಕಾರಣ, ಮಹೇಶ್ ಶೆಟ್ಟಿ ತಿಮರೋಡಿ ಅವರು ಮುಂದಿನ ಕಾನೂನು ಹೋರಾಟಕ್ಕಾಗಿ ಹೈಕೋರ್ಟ್ನ ಮೊರೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆಗೆ ಬಂದು ತೀರ್ಪು ಪ್ರಕಟವಾಗುವವರೆಗೂ ಅವರ ಮೇಲಿನ ಬಂಧನದ ತೂಗುಗತ್ತಿ ಮುಂದುವರಿಯಲಿದೆ. ಈ ಹಿಂದೆ ಗಡಿಪಾರು ಆದೇಶದಿಂದ ತಾತ್ಕಾಲಿಕ ನಿರಾಳತೆ ಪಡೆದಿದ್ದ ತಿಮರೋಡಿಗೆ, ಇದೀಗ ಅಕ್ರಮ ಶಸ್ತ್ರಾಸ್ತ್ರ ಪ್ರಕರಣವು ಹೊಸ ಕಾನೂನು ಸಂಕಷ್ಟವನ್ನು ತಂದೊಡ್ಡಿದೆ.








