ಇದು ನನ್ನ ಕೊನೆಯ ಮ್ಯಾಚ್…ಬಟ್ ಎಂಟು ವಿಕೆಟ್ ಪಡೆದೇ ಪಡೆಯುತ್ತೇನೆ….
ಮುತ್ತಯ್ಯ ಮುರಳೀಧರನ್… ಸ್ಮೈಲಿಂಗ್ ಕಿಲ್ಲರ್. ನಗು ನಗುತ್ತಲೇ ಎದುರಾಳಿ ಬ್ಯಾಟ್ಸ್ ಮೆನ್‍ಗಳ ವಿಕೆಟ್ ಪಡೆಯುವ ಮ್ಯಾಜಿಸಿಯನ್. ಅಷ್ಟಕ್ಕೂ ಮುತ್ತಯ್ಯ ಮುರಳೀಧರನ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿ ಹತ್ತು ವರ್ಷವಾಯ್ತು. ಆದ್ರೂ ಅವರ ಬೌಲಿಂಗ್ ಶೈಲಿಯನ್ನು ಮರೆಯೋಕೆ ಆಗಲ್ಲ. ಅಷ್ಟೇ ಅಲ್ಲ, ಒಬ್ಬ ಚಾಂಪಿಯನ್ ಬೌಲರ್‍ನ ಆತ್ಮವಿಶ್ವಾಸ ಯಾವ ಮಟ್ಟದಲ್ಲಿತ್ತು ಎಂಬುದನ್ನು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರ ವಿವರಿಸುತ್ತಾರೆ.
ಆರ್. ಅಶ್ವಿನ್ ಜೊತೆಗಿನ ಲೈವ್ ಕಾರ್ಯಕ್ರಮದಲ್ಲಿ ಕುಮಾರ ಸಂಗಕ್ಕರ ಮುತ್ತಯ್ಯ ಮುರಳೀಧರನ್ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಆಡುವುದಕ್ಕಿಂತ ಮುಂಚೆ ಏನು ಹೇಳಿದ್ದರು. 800 ವಿಕೆಟ್ ಪಡೆಯಲು ಇನ್ನೂ ಎಂಟು ವಿಕೆಟ್‍ಗಳು ಬೇಕಿದ್ದವು. ಆಗಲೇ ವಿದಾಯದ ನಿರ್ಧಾರವನ್ನು ತೆಗೆದುಕೊಂಡು, ವಿದಾಯದ ಪಂದ್ಯದಲ್ಲೇ ತನ್ನ ವಿಕೆಟ್‍ಗಳ ಸಂಖ್ಯೆಯನ್ನು 800ಕ್ಕೇರಿಸಿಕೊಳ್ಳುತ್ತೇನೆ ಅನ್ನೋ ವಿಶ್ವಾಸದ ಮಾತುಗಳನ್ನು ಸಂಗಕ್ಕರ ನೆನಪಿಸಿಕೊಂಡ್ರು.
ಅದು 2010ರ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ. ಮೊದಲ ಟೆಸ್ಟ್ ಪಂದ್ಯದ ನಂತರ ಮುರಳೀಧರನ್ ನಿವೃತ್ತಿ ಹೇಳುವುದಾಗಿ ಹೇಳಿದ್ದರು. ಆಗ ಎಲ್ಲರಿಗೂ ಅಚ್ಚರಿ. ಯಾಕಂದ್ರೆ ಟೆಸ್ಟ್ ಕ್ರಿಕೆಟ್ ನಲ್ಲಿ 800 ವಿಕೆಟ್ ಪಡೆಯಲು ಇನ್ನೂ ಎಂಟು ವಿಕೆಟ್‍ಗಳು ಬೇಕಾಗಿದ್ದವು. ಹೀಗಾಗಿ ಮುರಳೀಧರನ್ ಒಂದು ಐತಿಹಾಸಿಕ ದಾಖಲೆಯನ್ನು ಮಿಸ್ ಮಾಡಿಕೊಳ್ಳುತ್ತಾರೆ ಅಂತ ಎಲ್ಲರು ಭಾವಿಸಿದ್ದರು. ಆದ್ರಿಂದ ನಾವೆಲ್ಲಾ ಅವರ ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟೇವು. ಆದ್ರೆ ಮುರಳೀಧರನ್ ಕೇಳಲಿಲ್ಲ. ಕೊನೆಗೂ ತನ್ನ ಮಾತನ್ನು ಉಳಿಸಿಕೊಂಡು ಅರ್ಥಪೂರ್ಣ ವಿದಾಯವನ್ನೇ ಹೇಳಿದ್ದರು ಅಂತಾರೆ ಕುಮಾರ ಸಂಗಕ್ಕರ
ನಾನು ಮುರಳೀಧರನ್‍ಗೆ ಹೇಳಿದ್ದೆ. ನೀವು ಸವಾಲುಗಳನ್ನು ಸ್ವೀಕರಿಸುತ್ತೀರಿ ಎಂಬುದು ಗೊತ್ತು. ಒಂದು ವೇಳೆ ನೀವು ತುಂಬಾ ಆಯಾಸವಾಗಿದ್ರೆ ಎರಡನೇ ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ಪಡೆಯಿರಿ. ಮೂರನೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ಆಡಿ. ಆದ್ರೆ ಮಹತ್ವದ ಸಾಧನೆಯ ಮುಂದೆ ಎಂಟು ವಿಕೆಟ್‍ಗಳು ಬೇಕಾಗಿದ್ದಾಗ ಈ ನಿರ್ಧಾರ ತೆಗೆದುಕೊಳ್ಳುವುದು ಬೇಡ. ನಾನು ಆಯ್ಕೆ ಸಮಿತಿಯ ಮುಂದೆಯೂ ಇದನ್ನೇ ಪ್ರಸ್ತಾಪ ಮಾಡಿದ್ದೆ. ಆಗ ಆಯ್ಕೆಗಾರರು ಆ ಸಭೆಗೆ ಮುರಳೀಧರನ್ ಅವರನ್ನು ಕರೆಸಿದ್ದರು. ಆದ್ರೆ ಮುರಳೀಧರನ್ ಯಾರ ಮಾತನ್ನು ಕೇಳಲಿಲ್ಲ. ಮುರಳೀಧರನ್ ನನಗೆ ಹೇಳಿದ್ದು ಹೀಗೆ. ನಿನಗೆ ಏನು ಗೊತ್ತು. ಅದು ನಿನಗಾಗಿ
ಅಥವಾ ನನಗಾಗಿ ಆಗುವಂತಹ ಕೆಲಸಗಳು ಅಲ್ಲ. ನಾನು ಯಾವಾಗಲೂ ಸವಾಲುಗಳನ್ನು ತುಂಬಾನೇ ಪ್ರೀತಿಯಿಂದ ಸ್ವೀಕರಿಸುತ್ತೇನೆ. ಒಂದು ವೇಳೆ ನಾನು ಅತ್ಯುತ್ತಮ ಸ್ಪಿನ್ನರ್ ಆಗಿದ್ರೆ ಎಂಟು ವಿಕೆಟ್ ಪಡೆದೇ ಪಡೆಯುತ್ತೇನೆ. ಅದು ಗಾಲೆಯಲ್ಲೇ ಯಾವ ತಂಡದ ವಿರುದ್ಧವಾದ್ರೂ ಸರಿ. ಹಾಗೇ ನಾನು ಎಂಟು ವಿಕೆಟ್ ಪಡೆದ್ರೆ ಅದು 800 ವಿಕೆಟ್ ಮಾತ್ರವಲ್ಲ. ಆ ಪಂದ್ಯವನ್ನು ನಾವು ಗೆಲ್ಲುತ್ತೇವೆ. ಥ್ಯಾಂಕ್ಸ್… ನಾನು ಎಂಟು ವಿಕೆಟ್ ಪಡೆಯುತ್ತೇನೆ ಎಂದು ಹೇಳಿದ್ದರು ಎಂಬುದನ್ನು ಸಂಗಕ್ಕರ ಈ ಸಂದರ್ಭದಲ್ಲಿ ನೆನಪಿಸಿಕೊಂಡ್ರು.
ಗಾಲೆಯಲ್ಲಿ ನಡೆದಿದ್ದ ಆ ಟೆಸ್ಟ್ ಪಂದ್ಯದಲ್ಲಿ ಮುತ್ತಯ್ಯ ಮುರಳೀಧರನ್, ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್ ಹಾಗೂ ಎರಡನೇ ಇನಿಂಗ್ಸ್ ನಲ್ಲಿ ಮೂರು ವಿಕೆಟ್ ಪಡೆದು ತನ್ನ ಮಾತನ್ನು ಉಳಿಸಿಕೊಂಡಿದ್ದರು. ಅಲ್ಲದೆ ತನಗೆ ಹೇಗೆ ಬೇಕೋ ಅದೇ ರೀತಿ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು.








