ಸುರೇಶ್ ರೈನಾ 2005ರಲ್ಲಿ ಏಕದಿನ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದರು. ಆದ್ರೆ ಚೊಚ್ಚಲ ಏಕದಿನ ಪಂದ್ಯದಲ್ಲೇ ರೈನಾ ಡಕೌಟ್ ಆಗಿದ್ದರು. ಆನಂತರವೂ ಅವರು ಟೀಮ್ ಇಂಡಿಯಾದ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆದ್ರೆ ತನ್ನ ಕನಸಿನ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಲು ಅವರು ಕಾದಿದ್ದು ಬರೋಬ್ಬರಿ ಐದು ವರ್ಷಗಳು.
ಅಚ್ಚರಿ ಅಂದ್ರೆ ಸುರೇಶ್ ರೈನಾ 2005ರಲ್ಲಿ ಶ್ರೀಲಂಕಾ ವಿರುದ್ಧ ತನ್ನ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ರು. ಅದೇ ರೀತಿ ಐದು ವರ್ಷಗಳ ಬಳಿಕ ಅಂದ್ರೆ 2010ರಲ್ಲಿ ಶ್ರೀಲಂಕಾ ವಿರುದ್ಧ ಕೊಲೊಂಬೊದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದ ಕ್ಯಾಪ್ ಧರಿಸಿದ್ದರು. ಆದ್ರೆ ಚೊಚ್ಚಲ ಏಕದಿನ ಪಂದ್ಯದಂತೆ ರೈನಾ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿರಲಿಲ್ಲ. ಲಂಕಾದ ಸ್ಪಿನ್ ಮತ್ತು ವೇಗದ ದಾಳಿಯನ್ನು ದಿಟ್ಟವಾಗಿ ಎದುರಿಸಿ ಶತಕ ಸಹ ಸಿಡಿಸಿದ್ರು. ಈ ಮೂಲಕ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಭಾರತದ 12ನೇ ಆಟಗಾರನಾಗಿ ಹೊರಹೊಮ್ಮಿದ್ದರು. ಇನ್ನೊಂದು ವಿಶೇಷತೆ ಅಂದ್ರೆ ರೈನಾ ಅವರು ಶತಕ ಸಿಡಿಸುವಾಗ ಮತ್ತೊಂದು ಬದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದವರು ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್. ಅಲ್ಲದೆ ಈ ಪಂದ್ಯದಲ್ಲಿ ರೈನಾ ಮತ್ತು ತೆಂಡುಲ್ಕರ್ ದ್ವಿಶತಕದ ಜೊತೆಯಾಟವನ್ನು ಆಡಿದ್ದರು. ಸಚಿನ್ ದ್ವಿಶತಕ ದಾಖಲಿಸಿದ್ದರು. ಇದೀಗ ಸುರೇಶ್ ರೈನಾ ತನ್ನ ಚೊಚ್ಚಲ ಟೆಸ್ಟ್ ಪಂದ್ಯದ ಅನುಭವ ಹಾಗೂ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತೇನೆ ಎಂಬುದರ ಬಗ್ಗೆ ಸುಳಿವು ಯಾರು ಕೊಟ್ಟಿದ್ದರು, ಚೊಚ್ಚಲ ಟೆಸ್ಟ್ ಪಂದ್ಯದ ವೇಳೆ ಯಾವ ರೀತಿ ಒತ್ತಡಕ್ಕೆ ಸಿಲುಕಿದ್ದರು ಎಂಬುದನ್ನು ಆಕಾಶ್ ಚೋಪ್ರಾ ಜೊತೆ ಲೈವ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
ಅದು 2010ರ ಭಾರತ ಶ್ರೀಲಂಕಾ ನಡುವಿನ ಕೊಲೊಂಬೊ ಟೆಸ್ಟ್ ಪಂದ್ಯ. ಪಂದ್ಯಕ್ಕೆ ಮುನ್ನ ದಿನ ಯುವಿರಾಜ್ ಸಿಂಗ್ ನನಗೆ ಫೋನ್ ಮಾಡಿದ್ದರು. ರೈನಾ ನನಗೆ ಹುಷಾರಿಲ್ಲ. ಹೊಟ್ಟೆ ನೋವು. ನಾಳೆಯ ಪಂದ್ಯವನ್ನಾಡುವುದು ಕಷ್ಟ. ಯಾವುದಕ್ಕೂ ನೀನು ರೆಡಿಯಾಗಿರು ಅಂತ ಹೇಳಿದ್ದರು. ಯುವಿ ಫೋನ್ ಮಾಡಿ ಈ ರೀತಿ ಹೇಳಿದ ನಂತರ ನಾನು ತುಂಬಾನೇ ಒತ್ತಡಕ್ಕೆ ಸಿಲುಕಿದ್ದೆ. ರಾತ್ರಿ ಪೂರ್ತಿ ನಿದ್ದೆ ಮಾಡಿರಲಿಲ್ಲ. ತಲೆಯಲ್ಲಿ ಏನೇನೋ ಯೋಚನೆಗಳು. ಅದು ಬೇರೆ ಶ್ರೀಲಂಕಾದಲ್ಲಿ ಆಗ ಸಿಕ್ಕಾಪಟ್ಟೆ ಸೆಖೆ ಇತ್ತು. ಇನ್ನೊಂದೆಡೆ ಚೊಚ್ಚಲ ಏಕದಿನ ಪಂದ್ಯದಂತೆ ಇಲ್ಲೂ ಡಕೌಟಾದ್ರೆ ಅನ್ನೋ ಭಯ. ಮತ್ತೊಂದೆಡೆ, ಸಂಗಕ್ಕರ, ಜಯವರ್ಧನೆ, ತಿಲಕರತ್ನೆ ಸೇರಿದಂತೆ ಶ್ರೀಲಂಕಾದಂತಹ ಬಲಿಷ್ಠ ತಂಡದ ವಿರುದ್ಧ.. ಹೀಗೆ ನಾನು ಒತ್ತಡಕ್ಕೆ ಸಿಲುಕಿಕೊಂಡೇ ರಾತ್ರಿ ಕಳೆದಿದ್ದೆ ಅಂತಾರೆ ಸುರೇಶ್ ರೈನಾ.
ಸರಿ ಮರುದಿನ ಟಾಸ್ ಆಯ್ತು. ಆದ್ರೆ ನಮಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಎರಡು ದಿನಗಳ ಕಾಲ ನಾವು ಫೀಲ್ಡಿಂಗ್ ಮಾಡಬೇಕಾಯ್ತು. ಕುಮಾರ ಸಂಗಕ್ಕರ (219), ಜಯವರ್ಧನೆ (174), ಪರ್ನವಿತನ (100) ಶತಕ ಸಿಡಿಸಿದಾಗ ಶ್ರೀಲಂಕಾದ ಮೊತ್ತ 4 ವಿಕೆಟ್‍ಗೆ 642 ರನ್. ಅಲ್ಲದೆ ಇನಿಂಗ್ಸ್ ಕೂಡ ಡಿಕ್ಲೇರ್ ಮಾಡಿಕೊಂಡಿತ್ತು. ಹೀಗಾಗಿ ಭಾರತೀಯ ಬೌಲರ್‍ಗಳು ಎರಡು ದಿನ ತುಂಬಾನೇ ಬೇಸರದಲ್ಲಿದ್ದರು. ಯಾರು ಕೂಡ ಖುಷಿಯಾಗಿರಲಿಲ್ಲ. ಆದ್ರೆ ಎರಡು ದಿನ ಎದುರಾಳಿ ತಂಡದ ಆಟವನ್ನು ನೋಡುತ್ತಿದ್ದಂತೆ ನನ್ನಲ್ಲಿದ್ದ ಒತ್ತಡಗಳು ಕೂಡ ನಿವಾರಣೆಯಾಗಿದ್ದವು ಎಂಬುದನ್ನು ಸುರೇಶ್ ರೈನಾ ನೆನಪಿಸಿಕೊಳ್ತಾರೆ.
ನಂತರ ನಮ್ಮ ಬ್ಯಾಟಿಂಗ್ ಸರದಿ. ಆಗ ನಾನು ಬ್ಯಾಟಿಂಗ್‍ಗೆ ಪೂರ್ತಿಯಾಗಿ ರೆಡಿಯಾಗಿದ್ದೆ. ಆದ್ರೂ ಚೊಚ್ಚಲ ಏಕದಿನ ಪಂದ್ಯದಂತೆ ಟೆಸ್ಟ್ ನಲ್ಲೂ ಡಕೌಟ್ ಆದ್ರೆ.. ಅನ್ನೋ ಸಣ್ಣ ಆತಂಕ ಇದ್ದೆ ಇತ್ತು. ಹಾಗೇ ಲಕ್ಷ್ಮಣ್ ಔಟಾಗುತ್ತಿದ್ದಂತೆ ನಾನು ಬ್ಯಾಟ್ ಹಿಡಿದು ಮೈದಾನಕ್ಕಿಳಿದೆ. ಆಗ ಬ್ಯಾಟಿಂಗ್ ಮಾಡುತ್ತಿದ್ದವರು ಸಚಿನ್ ತೆಂಡುಲ್ಕರ್. ಇದು ನನಗೆ ತುಂಬಾನೇ ನೆರವಾಯ್ತು. ಆಗ ನಾವು ಫಾಲೋಆನ್ ನಿಂದ ತಪ್ಪಿಸಿಕೊಳ್ಳಲು 201 ರನ್‍ಗಳು ಬೇಕಿದ್ದವು. ಸಚಿನ್ ಮತ್ತು ನಾನು ಅದ್ಭುತವಾದ ಇನಿಂಗ್ಸ್ ಕಟ್ಟಿದ್ದೇವು. ಸಚಿನ್ ನನಗೆ ಮಾರ್ಗದರ್ಶನ ನೀಡುತ್ತಿದ್ದರು. ನಾನು ಆಕರ್ಷಕ 120 ರನ್ ಸಿಡಿಸಿದ್ದೆ. ಅಲ್ಲದೆ ಸಚಿನ್ ಜೊತೆ ಸೇರಿಕೊಂಡು 256 ರನ್‍ಗಳ ಜೊತೆಯಾಟವನ್ನು ಆಡಿದ್ದೆ. ಈ ಮೂಲಕ ಭಾರತ ಫಾಲೋ ಆನ್ ಭೀತಿಯಿಂದ ತಪ್ಪಿಸಿಕೊಂಡು ಲಂಕಾ ವಿರುದ್ಧ ಇನಿಂಗ್ಸ್ ಮುನ್ನಡೆ ಗಳಿಸಲು ಕೂಡ ಯಶಸ್ವಿಯಾಯ್ತು. ತೆಂಡುಲ್ಕರ್ ಮನಮೋಹಕ 203 ರನ್ ದಾಖಲಿಸಿದ್ದರು. ಭಾರತ 707 ರನ್ ದಾಖಲಿಸಿತ್ತು. ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು ಎಂಬುದನ್ನು ಸುರೇಶ್ ರೈನಾ ಈ ವೇಳೆ ಸ್ಮರಿಸಿಕೊಂಡ್ರು.
ಇದೇ ವೇಳೆ ಸುರೇಶ್ ರೈನಾ ಇನ್ನೊಂದು ವಿಚಾರವನ್ನು ಹೇಳಿಕೊಂಡ್ರು. ಟಿ-ಟ್ವೆಂಟಿಯಲ್ಲಿ ನಾವು ಸ್ವಲ್ಪ ರಿಸ್ಕ್ ತೆಗೆದುಕೊಳ್ಳಬಹುದು. ಆದ್ರೆ ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗೆ ನಾವು ಸಾಕಷ್ಟು ತಯಾರಿಗಳನ್ನು ನಡೆಸಬೇಕಾಗುತ್ತದೆ. ಹಾಗೇ ನಾನು ಆಫ್ ಸ್ಪಿನ್ನರ್ ಮತ್ತು ಬೌನ್ಸರ್ ಎಸೆತಗಳಿಗೆ ಕೆಲವೊಂದು ಬಾರಿ ಎಡವಿಬಿದ್ದಿದ್ದೇನೆ ಎಂಬುದನ್ನು ಸಹ ಒಪ್ಪಿಕೊಂಡ್ರು. ಹಾಗೇ ನನಗೆ ಏಕದಿನ ಪಂದ್ಯದಂತೆ ಟೆಸ್ಟ್ ತಂಡದಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ ಅಂತ ಸ್ವಲ್ಪ ಬೇಜಾರು ಕೂಡ ಮಾಡಿಕೊಂಡ್ರು.








