ಬೆಂಗಳೂರು : ಇ-ವೇ ಬಿಲ್ ದುರ್ಬಳಕೆ ಮತ್ತಿತರ ಅಕ್ರಮ ಪತ್ತೆಹಚ್ಚಿ ದಂಡ ವಿಧಿಸುವುದರೊಂದಿಗೆ ಸರಕು ಸಾಗಾಣಿಕೆ ಮಾಡುವ ಸಾರಿಗೆ ಕಂಪೆನಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸೂಚಿಸಿದ್ದಾರೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದ ತೆರಿಗೆ ಸಂಗ್ರಹ ಸ್ಥಿತಿಗತಿಯನ್ನು ಅವರು ಪರಿಶೀಲಿಸಿದರು. ಕಳೆದ ತಿಂಗಳು ಸಭೆ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ನಕಲಿ ಇ-ವೇ ಬಿಲ್ ಗಳ ಬಳಕೆ, ಸರಕು ಸಾಗಾಣಿಕೆಗೆ ನೀಡುವ
ಸಮಯಾವಕಾಶದ ದುರ್ಬಳಕೆ ಮುಂತಾದ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಇಂದಿನ ಸಭೆಯಲ್ಲಿ ಆ ವಿಚಾರವಾಗಿ ಸಿಎಂ ಪರಿಶೀಲನೆ ನಡೆಸಿದರು. ಆಗ ಅಧಿಕಾರಿಗಳು ರಸ್ತೆ ಜಾಗೃತಿ ತಂಡಗಳನ್ನು 77 ರಿಂದ 116ಕ್ಕೆ ಹೆಚ್ಚಿಸಲಾಗಿದೆ.
ಈ ತಂಡಗಳು 2.89 ಲಕ್ಷ ಸರಕು ವಾಹನಗಳು ಹಾಗೂ 7.46 ಲಕ್ಷ ಇ-ವೇ ಬಿಲ್‌ಗಳನ್ನು ಪರಿಶೀಲಿಸಿವೆ. ಇದರಲ್ಲಿ ಸುಮಾರು 300 ಅಕ್ರಮಗಳು ಪತ್ತೆಯಾಗಿವೆ. 6.21 ಕೋಟಿ ರೂಪಾಯಿ ತೆರಿಗೆ ಹಾಗೂ ದಂಡ ಸಂಗ್ರಹ ಮಾಡಲಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಅಲ್ಲದೆ 40 ಲಕ್ಷ ರೂಪಾಯಿಗೂ ಹೆಚ್ಚಿನ ವ್ಯವಹಾರ ಇರುವ ಡೀಲರುಗಳ ಸಮೀಕ್ಷೆ ನಡೆಸುವಂತೆ ಹಾಗೂ ಮಾಸಿಕ 20 ಲಕ್ಷ ರೂ. ಗಳಿಗೂ ಹೆಚ್ಚು ಬಾಡಿಗೆ ಸಂಗ್ರಹಿಸುವ ದೊಡ್ಡ ನಗರಗಳ ವಾಣಿಜ್ಯ ಸಂಕೀರ್ಣಗಳ ಸಮೀಕ್ಷೆ ನಡೆಸುವಂತೆ ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಬಗ್ಗೆ ಸಭೆಗೆ ಮಾಹಿತಿ ನೀಡಿದ ಅಧಿಕಾರಿಗಳು, ಕೇಂದ್ರ ಸರ್ಕಾರದಿಂದ 2019-20ನೇ ಸಾಲಿನ ಡಿಸೆಂಬರ್ ನಿಂದ ಫೆಬ್ರುವರಿ ತಿಂಗಳ ವರೆಗಿನ ಜಿಎಸ್‌ಟಿ ಪರಿಹಾರ ಮೊತ್ತ 4314.13 ಕೋಟಿ ರೂ. ಬಿಡುಗಡೆಯಾಗಿದೆ. ಅಲ್ಲದೆ, ರಾಜ್ಯದಲ್ಲಿ ಪೆಟ್ರೋಲ್,ಡೀಸೆಲ್ ಮೇಲಿನ ತೆರಿಗೆ ಸಂಗ್ರಹದಲ್ಲಿ ಏರಿಕೆ ಕಂಡು ಬರುತ್ತಿದೆ ಎಂದು ಹೇಳಿದರು ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್, ವಾಣಿಜ್ಯ ತೆರಿಗೆ
ಇಲಾಖೆ ಆಯುಕ್ತ ಎಂ ಎಸ್ ಶ್ರೀಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.








