ಶಿವಮೊಗ್ಗ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ Saaksha Tv
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಹಿಜಾಬ್ – ಕೇಸರಿ ಶಾಲು ವಿವಾದ ತಾರಕಕ್ಕೆ ಏರಿದ ಪರಿಣಾಮ ಜಿಲ್ಲೆಯಾಧ್ಯಂತ 144 ಸೆಕ್ಷನ್ ಅಡಿಯಲ್ಲಿ ಇಂದು ಮತ್ತು ನಾಳೆ ಸೇರಿ 2 ದಿನ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಹಿಜಾಬ್ ವಿರೋಧಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆಗೆ ಇಳಿದಿದ್ದರು. ಜೈ ಶ್ರೀರಾಂ ಘೋಷಣೆ ಕೂಗುತ್ತಾ ಧರಣಿ, ಪ್ರತಿಭಟನೆ ಮಾಡಿದ್ದಾರೆ. ಅಲ್ಲದೇ ಕಾಲೇಜಿನ ಆವರಣದಲ್ಲಿದ್ದಂತ ಧ್ವಜ ಕಂಬವೇರಿ ಕೇಸರಿ ಧ್ವಜವನ್ನು ಹಾರಿಸಿದರು.
ಪ್ರತಿಭಟನೆ ತಿಳಿಗೊಳಿಸಲು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ವಿದ್ಯಾರ್ಥಿಗಳನ್ನು ಮನೊವಲಿಸಲು ಪ್ರಯತ್ನಿಸಿದ್ದಾರೆ. ಆಗ ವಿದ್ಯಾರ್ಥಿಗಳು ಇದಕ್ಕೆ ಬಗ್ಗದೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿದೆ. ಆಗ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ.
ಪರೀಸ್ಥಿತಿ ಹದಗೆಡುತ್ತಿದಂತೆ ಡಿಸಿ ಕಾಲೇಜಿಗೆ ಆಗಮಿಸಿ, ನಿಯಂತ್ರಣಕ್ಕೆ ಮುಂದಾದರು. ಈ ನಡುವೆಯೂ ಪೊಲೀಸರ ಮೇಲೆ ಕಲ್ಲು ತೂರಾಟ, ಕಾಲೇಜು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಹಶೀಲ್ದಾರ್ ನಾಗರಾಜ್ ಅವರು ಜಿಲ್ಲೆಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ ದಿನಾಂಕ 08-02-2022ರ ಇಂದು ಮತ್ತು ದಿನಾಂಕ 09-02-2022ರಂದು 2 ದಿನ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.