ಈ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ – ಶಿಕ್ಷಣ ಸಚಿವ ನಾಗೇಶ್
ನೈತಿಕ ಶಿಕ್ಷಣದ ಭಾಗವಾಗಿ ಈ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರ್ಪಡೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಪಿಯುಸಿ ಪರೀಕ್ಷೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನೈತಿಕ ಶಿಕ್ಷಣವನ್ನ ಪಠ್ಯದಲ್ಲಿ ಸೇರಿಸುವ ಕುರಿತು ಸಾಕಷ್ಟು ಬೇಡಿಕೆಗಳು ಬಂದಿದೆ. ಹೀಗಾಗಿ ಪಂಚತಂತ್ರ, ರಾಮಾಯಣ, ಮಹಾಭಾರತ ಸೇರಿದಂತೆ ಮಾರಲ್ ಸೈನ್ಸ್ ಅಂಶಗಳನ್ನ ಪಠ್ಯದಲ್ಲಿ ಸೇರಿಸುತ್ತೇವೆ. ಇದರ ಜೊತೆಗೆ ಈ ವರ್ಷದಿಂದಲೇ ಭಗವದ್ಗೀತೆ ಸಹ ಸೇರ್ಪಡೆ ಆಗುತ್ತದೆ. ಆದರೆ ಪರೀಕ್ಷೆಗೆ ಈ ವಿಷಯ ಇರುವುದಿಲ್ಲ. ಇದು ನೈತಿಕ ಶಿಕ್ಷಣದ ಭಾಗವಾಗಿಯಷ್ಟೇ ಇರಲಿವೆ ಎಂದು ತಿಳಿಸಿದರು.
ನಂತರ ಪಿಯುಸಿ ಪರೀಕ್ಷೆ ಕುರಿತು ಮಾತನಾಡಿ ಸಮವಸ್ತ್ರ ಧರಿಸಿ ಬರಬೇಕು ಹಿಜಾಬ್ ಸೇರಿ ಯಾವುದೇ ಧಾರ್ಮಿಕ ವಸ್ತ್ರಗಳನ್ನ ಧರಿಸಲು ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದಿರುವ ಶಿಕ್ಷಣ ಸಚಿವರು ಏಪ್ರಿಲ್ 22 ರಿಂದ ಮೇ 18 ವರೆಗೆ 2021-22 ನೇ ಸಾಲಿನ ಪಿಯುಸಿ ಪರೀಕ್ಷೆ ನಡೆಸಲಾಗುತ್ತಿದೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದಿಲ್ಲ. ದ್ವಿತಿಯ ಪಿಯುಸಿ ಪರೀಕ್ಷೆ ಬರೆಯಲು ಸಮವಸ್ತ್ರ ಕಡ್ಡಾಯ ಎಂದು ತಿಳಿಸಿದರು.








