SL v PAK: ಲಂಕಾ ವಿರುದ್ಧದ ಮಹತ್ವದ ಪಂದ್ಯ: ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ಕೆ
– ಫೈನಲ್ ಪ್ರವೇಶಿಸಲು ಎರಡು ತಂಡಗಳಿಗೂ ಗೆಲುವು ಅನಿವಾರ್ಯ
ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿ ಆಗುತ್ತಿದ್ದು, ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಕೊಲಂಬೊದಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಆರಂಭದಲ್ಲೇ ಮಳೆರಾಯ ಅಡ್ಡಿಪಡಿಸಿದ ಪರಿಣಾಮ 5 ಓವರ್‌ಗಳನ್ನ ಕಡಿತಗೊಳಿಸಿ 45 ಓವರ್‌ಗಳ ಪಂದ್ಯವನ್ನ ನಡೆಸಲಾಗುತ್ತಿದೆ. ಏಷ್ಯಾಕಪ್‌ನ ಫೈನಲ್ ಪ್ರವೇಶಿಸಲು ಎರಡು ತಂಡಕ್ಕೂ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದ್ದು, ಇಂದಿನ ನಿರ್ಣಾಯಕ ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡು ಸಜ್ಜಾಗಿವೆ. ಅದರಂತೆ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜ಼ಂ, ಬ್ಯಾಟಿಂಗ್ ಆಯ್ಕೆ ಮಾಡಿದ್ದಾರೆ.
ಮೇಲ್ನೋಟಕ್ಕೆ ಇಂದಿನ ಪಂದ್ಯದಲ್ಲಿ ಎರಡು ತಂಡಗಳು ಸಮಬಲ ಹೊಂದಿದ್ದರು. ಈ ಹಿಂದಿನ ಮುಖಾಮುಖಿ ಗಮನಿಸಿದರೆ ಪಾಕಿಸ್ತಾನ ಮೇಲುಗೈ ಸಾಧಿಸಿದೆ. ಆದರೆ ಎರಡು ತಂಡಗಳು ತಮ್ಮ ಹಿಂದಿನ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಕಂಡಿದ್ದು, ಸೋಲಿನ ಆಘಾತದ ಮೂಲಕ ಬರುತ್ತಿರುವ ಎರಡು ತಂಡಗಳು ಜಯದ ಹಾದಿಗೆ ಮರಳುವ ಲೆಕ್ಕಾಚಾರದೊಂದಿಗೆ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿವೆ. ಟೂರ್ನಿಯ ಫೈನಲ್ ಪ್ರವೇಶದ ನಿರೀಕ್ಷೆಯಲ್ಲಿರುವ ಈ ಪಂದ್ಯ ಉಭಯ ತಂಡಗಳಿಗೆ ಸೆಮಿಫೈನಲ್ ಪಂದ್ಯದಂತಾಗಿದೆ.
ಈ ಪಂದ್ಯಕ್ಕಾಗಿ ಎರಡು ತಂಡಗಳಲ್ಲೂ ಸಾಕಷ್ಟು ಬದಲಾವಣೆಗಳನ್ನ ಮಾಡಿಕೊಳ್ಳಲಾಗಿದೆ. ಪ್ರಮುಖವಾಗಿ ತಂಡದ ಪ್ರಮುಖ ಆಟಗಾರರಾದ ಹ್ಯಾರಿಸ್ ರಾಫ್ ಹಾಗೂ ನಸೀಮ್ ಶಾ ಅವರ ಅನುಪಸ್ಥಿತಿ ಪಾಕಿಸ್ತಾನಕ್ಕೆ ದೊಡ್ಡ ಚಾಲೆಂಜ್ ಆಗಿದೆ. ಮತ್ತೊಂದೆಡೆ ಶ್ರೀಲಂಕಾ ಕೂಡ ಕೆಲವೊಂದು ಬದಲಾವಣೆ ಮಾಡಿಕೊಂಡು ಪಾಕಿಸ್ತಾನದ ಚಾಲೆಂಜ್ ಎದುರಿಸಲು ಸಜ್ಜಾಗಿದೆ.
ಶ್ರೀಲಂಕಾ ತಂಡ: ಪತುಮ್ ನಿಸ್ಸಾಂಕ, ಕುಸಲ್ ಪೆರೇರ, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿಸಿಲ್ವಾ, ದಸುನ್ ಶನಕ, ದುನಿತ್ ವೆಲ್ಲಾಲಗೆ, ಮಹೀಶ್ ತೀಕ್ಷಣ, ಪ್ರಮೋದ್ ಮದುಶನ್, ಮತೀಶ ಪತಿರಣ.
ಪಾಕಿಸ್ತಾನ ತಂಡ: ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹ್ಯಾರಿಸ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ(ಜೂ), ಜಮಾನ್ ಖಾನ್.








