ಬೆಂಗಳೂರು : ಕೊರೊನಾ ಸಂದರ್ಭದಲ್ಲಿ ಯಾವುದೇ ಬಂಡಾಯ ಮಾಡಿಲ್ಲ, ಅಸಮಾಧಾನವೂ ಇಲ್ಲ. ಎಲ್ಲಾ ಶಾಸಕರು ಕೂಡಿ ಊಟ ಮಾಡಿದೆವು ವಿನಃ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಶಾಸಕರ ರಹಸ್ಯ ಮೀಟಿಂಗ್ ಬಗ್ಗೆ ಶಾಸಕ ಉಮೇಶ್ ಕತ್ತಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ದಿನಗಳ ಹಿಂದೆ ನಮ್ಮ ಮನೆಯಲ್ಲಿ ಊಟ ಮಾಡಿದ್ವಿ. ಇದೇ ಗುರುವಾರ ಮತ್ತೆ ನಮ್ಮ ಮನೆಯಲ್ಲಿ ಊಟಕ್ಕೆ ಸೇರಿದ್ವಿ. ಇದು ಮುಖ್ಯಮಂತ್ರಿ ಅವರ ಗಮನಕ್ಕೂ ಬಂದಿದೆ. ಕಳೆದ ಮೂರು ದಿನಗಳಿಂದ ಮತ್ತೆ ನಾವು ಭೇಟಿ ಆಗಿಲ್ಲ. ಆದರೆ ಊಟ ಮಾಡುವ ಸಂದರ್ಭದಲ್ಲಿ ನಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದೇವೆ. ಈ ವೇಳೆ ಯಾವುದೇ ರಾಜಕೀಯದ ಚರ್ಚೆ ನಡೆದಿಲ್ಲ. ಬಂಡಾಯದ ಚರ್ಚೆಯಾಗಿಲ್ಲ, ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ನಡುವೆ ಬಂಡಾಯ ಶಾಸಕರ ಭೂಜನ ಕೂಟ ಎಂಬ ಗೊಂದಲ ಸೃಷ್ಟಿಯಾಗಿದೆ. ನಾವು ಜವಾಬ್ದಾರಿ ಶಾಸಕರು, ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಹೀಗಾಗಿ ಈ ಕೊರೊನಾ ಸಂದರ್ಭದಲ್ಲಿ ಯಾವುದೇ ಬಂಡಾಯ ಮಾಡಿಲ್ಲ, ಅಸಮಾಧಾನವೂ ಇಲ್ಲ. ಎಲ್ಲಾ ಶಾಸಕರು ಕೂಡಿ ಊಟ ಮಾಡಿದೆವು ವಿನಃ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಕತ್ತಿ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಇದೇ ವೇಳೆ ಸಿಎಂ ಭೇಟಿ ಬಗ್ಗೆ ಮಾತನಾಡಿದ ಅವರು, ಮೊನ್ನೆ ನನ್ನ ತಮ್ಮನನ್ನು ರಾಜ್ಯಸಭೆಗೆ ಅಭ್ಯರ್ಥಿಯಾಗಿ ಆಯ್ಕೆಗೆ ವಿಚಾರವಾಗಿ ಮುಖ್ಯಮಂತ್ರಿ ಮನೆಗೆ ಹೋಗಿ ಮನವಿ ಮಾಡಿದ್ದೇನೆ. ಲೋಕಸಭೆ ವೇಳೆ ರಾಜ್ಯಸಭೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಅದನ್ನು ಕೇಳಲು ಸಿಎಂ ಮನೆಗೆ ಹೋಗಿದ್ದೆವು. ಯಾವಾಗ ಮಾಡುತ್ತಾರೋ ಮಾಡಲಿ ಎಂದರು.








