ಟೀಂ ಇಂಡಿಯಾಕ್ಕೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿರುವ ಕನ್ನಡಿಗ ಕೆಎಲ್ ರಾಹುಲ್, ಇದಕ್ಕಾಗಿ ಆ.18ರಂದು ಫಿಟ್ನೆಸ್ಟ್ ಪರೀಕ್ಷೆಗೆ ಒಳಪಡಲಿದ್ದಾರೆ.
ಗಾಯದ ಸಮಸ್ಯೆಯ ಕಾರಣದಿಂದಾಗಿ ಕೆಎಲ್ ರಾಹುಲ್, ಕಳೆದ ಕೆಲವು ತಿಂಗಳುಗಳಿಂದ ತಂಡದಿಂದ ಹೊರಗುಳಿದಿದ್ದು, ಇದೀಗ ಚೇತರಿಕೆಯ ಹಾದಿಯಲ್ಲಿದ್ದಾರೆ. ಹೀಗಾಗಿ ಮುಂಬರುವ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಶೀಘ್ರವೇ ತಂಡಕ್ಕೆ ಮರಳುವ ದೊಡ್ಡ ನಿರೀಕ್ಷೆ ಹೊಂದಿದ್ದು, ಇದಕ್ಕಾಗಿ ರಾಹುಲ್ ಎಲ್ಲಾ ರೀತಿಯ ಅಭ್ಯಾಸ ನಡೆಸುತ್ತಿದ್ದಾರೆ.
ಈ ನಡುವೆ ಇದೇ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಏಷ್ಯಾಕಪ್‌ಗೆ ಟೀಂ ಇಂಡಿಯಾ ಆಟಗಾರರ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೇ ನಡೆಯಲಿದೆ. ಹೀಗಾಗಿ ತಂಡಕ್ಕೆ ವಾಪಸ್ಸಾಗುವ ತವಕದಲ್ಲಿರುವ ಕನ್ನಡಿಗ ರಾಹುಲ್, ಆಗಸ್ಟ್ 18ರಂದು ಫಿಟ್ನೆಸ್ ಪರೀಕ್ಷೆಗೆ ಒಳಪಡಲಿದ್ದು, ಇದಾದ ನಂತರ ರಾಹುಲ್ ಅವರನ್ನ ಏಷ್ಯಾಕಪ್ ಟೂರ್ನಿಗೆ ತಂಡಕ್ಕೆ ಸೇರ್ಪಡೆ ಮಾಡುವ ಕುರಿತಂತೆ ನಿರ್ಧಾರ ಕೈಗೊಳ್ಳಲಿದ್ದಾರೆ.
ಟೀಂ ಇಂಡಿಯಾದ ಪ್ರಮುಖ ಬ್ಯಾಟರ್ ಆಗಿರುವ ಕೆಎಲ್ ರಾಹುಲ್, 2023ರ ಐಪಿಎಲ್ ಪಂದ್ಯಾವಳಿಯಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಗಾಯಗೊಂಡಿದ್ದರು. ಪರಿಣಾಮ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಸೇರಿದಂತೆ ಸದ್ಯ ನಡೆಯುತ್ತಿರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಂಡದಿಂದ ಹೊರಗುಳಿದಿದ್ದರು. ಇದೀಗ ಗಾಯದ ಸಮಸ್ಯೆಯಿಂದ ಸಂಪೂರ್ಣ ಗುಣಮುಖರಾಗಿರುವ ರಾಹುಲ್, ಏಷ್ಯಾಕಪ್ ಟೂರ್ನಿಯ ವೇಳೆಗೆ ತಂಡಕ್ಕೆ ವಾಪಸ್ಸಾಗುವ ವಿಶ್ವಾಸ ಮೂಡಿಸಿದ್ದಾರೆ. ಇದಕ್ಕಾಗಿ ರಾಹುಲ್ ಈಗಾಗಲೇ ಬ್ಯಾಟಿಂಗ್ ಅಭ್ಯಾಸ ಸಹ ಆರಂಭಿಸಿದ್ದಾರೆ.