ಎನ್-95 ಮಾಸ್ಕ್ ಧರಿಸುವಿಕೆಯಿಂದ ಕೊರೊನಾ ತಡೆ ಅಸಾಧ್ಯ: ಕೇಂದ್ರ ಆರೋಗ್ಯ ಸಚಿವಾಲಯ
ನವದೆಹಲಿ : ಎನ್-95 ಮಾಸ್ಕ್ ಹಾಕಿಕೊಳ್ಳುವುದರಿಂದ ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ದೇಶದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ವೈರಸ್ ನಿಂದ ರಕ್ಷಣೆ ಮಾಡಿಕೊಳ್ಳಲು ಜನರು ಮಾಸ್ಕ್ ನ ಮೋರೆ ಹೋಗಿದ್ದಾರೆ. ಅದರಲ್ಲೂ ಹೆಚ್ಚಿನ ಮಂದಿ ಎನ್ 95 ಮಾಸ್ಕ್ ಬಳಸುತ್ತಿದ್ದು, ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ರಾಜೀವ್ ಗರ್ಗ್, ಎಲ್ಲಾ ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಎನ್-95 ಮಾಸ್ಕ್ ಧರಿಸುವುದರಿಂದ ವೈರಾಣು ಒಳ ಬರುವುದು ಹಾಗೂ ಹೊರ ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಎನ್ -95 ಮಾಸ್ಕ್ ಬಳಕೆ ತಡೆಯಲು ಸೂಕ್ತ ಮಾರ್ಗಸೂಚಿ ಜಾರಿಗೊಳಿಸುವುದು ಅವಶ್ಯಕವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೆ ಮನೆಯಲ್ಲಿ ತಯಾರಿಸಿರುವ ಮಾಸ್ಕ್ ಬಳಕೆ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಕೊರೊನಾ ನಿಯಂತ್ರಣಕ್ಕೆ ಮನೆಯಲ್ಲಿ ನಿರ್ಮಾಣ ಮಾಡುವ ಮಾಸ್ಕ್ ಹಾಕಿಕೊಳ್ಳುವುದು ಸೂಕ್ತವಾಗಿದ್ದು, ಪ್ರತಿದಿನ ತೊಳೆದು ಹಾಕಿಕೊಳ್ಳುವುದು ಉತ್ತಮ ಎಂದಿದೆ ಇಲಾಖೆ.








