ನವದೆಹಲಿ : ಭಾರತದಲ್ಲಿ ಕೊರೊನಾಸುರನ ಓಟ ಮುಂದುವರಿದಿದ್ದು, ಇಂದು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಕೋವಿಡ್-19 ಸೋಂಕಿತರ ಸಂಖ್ಯೆ ಹೊಸ ದಾಖಲೆಯನ್ನು ಬರೆದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 17 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಈ ಸೋಂಕಿತರ ಸಂಖ್ಯೆ ನೋಡಿದರೆ ಶನಿವಾರದ ವೇಳೆಗೆ ರೋಗಿಗಳ ಸಂಖ್ಯೆ 5 ಲಕ್ಷ ಗಡಿ ದಾಟುವ ಸಾಧ್ಯತೆ ಸಜ್ಜಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇಂದಿನ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 17,296 ಮಂದಿಗೆ ಸೋಂಕು ದೃಢಪಟ್ಟಿದ್ದು, 407 ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 4,90,401ಕ್ಕೆ ಹಾಗೂ ಸೋಂಕಿಗೆ ಮೃತಪಟ್ಟವರ ಸಂಖ್ಯೆ 15,301ಕ್ಕೆ ಏರಿಕೆ ಆಗಿದೆ.
ಉಳಿದಂತೆ ಒಟ್ಟು 4,90,401 ಸೋಂಕಿತರ ಪೈಕಿ 1,89,463 ಕೊರೊನಾ ಪೀಡಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದದ್ದಾರೆ. 2,85,637 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇನ್ನು ದೇಶದಾದ್ಯಂತ ಬಿಎಸ್ ಎಫ್ ನ 868 ಮಂದಿ ಸೈನಿಕರಿಗೆ ಕೊರೊನಾ ದೃಢಪಟ್ಟಿದೆ. ಇದರಲ್ಲಿ 245 ಪ್ರಕರಣಗಳು ಸಕ್ರಿಯವಾಗಿದ್ದು, 618 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 5 ಮಂದಿಯನ್ನು ಕೊರೊನಾ ಬಲಿ ಪಡೆದಿದೆ.








